ಪ್ಯಾರಿಸ್ ಒಲಿಂಪಿಕ್ಸ್ | ನಾಳೆಯಿಂದ ಕುಸ್ತಿಪಟುಗಳಾದ ವಿನೇಶ್, ಅಮನ್, ಅಂತಿಮ್ರಿಂದ ಪದಕದ ಬೇಟೆ ಆರಂಭ

ವಿನೇಶ್ ಫೋಗಟ್ , ಅಮನ್ ಸೆಹ್ರಾವತ್ , ಅಂತಿಮ್ ಪಾಂಘಾಲ್ | PC : X
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸೋಮವಾರದಿಂದ ಕುಸ್ತಿ ಸ್ಪರ್ಧಾವಳಿಯು ಆರಂಭವಾಗಲಿದ್ದು ವಿನೇಶ್ ಫೋಗಟ್ ಅವರು ಗೇಮ್ಸ್ ಗಿಂತ ಮೊದಲು ಆಗಿರುವ ಎಲ್ಲ ಕಹಿ ಘಟನೆಗಳನ್ನು ಮರೆತು ಒಲಿಂಪಿಕ್ಸ್ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ವಿನೇಶ್ ಜೊತೆಗೆ ಇನ್ನೂ ಐವರು ಕುಸ್ತಿಪಟುಗಳು ಸ್ಪರ್ಧಾ ಕಣಕ್ಕೆ ಇಳಿಯಲಿದ್ದಾರೆ.
ವಿಶ್ವ ಚಾಂಪಿಯನ್ ಶಿಪ್ನಲ್ಲಿ ಎರಡು, ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಮೂರು ಹಾಗೂ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ 8 ಪದಕಗಳನ್ನು ಜಯಿಸಿರುವ ವಿನೇಶ್ ಭಾರತದ ಪ್ರಮುಖ ಮಹಿಳಾ ಕುಸ್ತಿಪಟುವಾಗಿದ್ದಾರೆ. ಆದರೆ ವಿನೇಶ್ ಅವರು ಈ ಹಿಂದಿನ ಎರಡು ಒಲಿಂಪಿಕ್ಸ್ ನಲ್ಲಿ ನಿರಾಶೆ ಅನುಭವಿಸಿದ್ದರು. ರಿಯೋ ಒಲಿಂಪಿಕ್ಸ್ ನಲ್ಲಿ(2016) ಕಾಲುನೋವು ಅನುಭವಿಸಿದ್ದರೆ, ಟೋಕಿಯೊ(2021)ಗೇಮ್ಸ್ನಲಿ ಕ್ವಾರ್ಟರ್ ಫೈನಲ್ನಲ್ಲಿ ಸೋತಿದ್ದರು.
ಈ ಬಾರಿ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿರುವ ವಿನೇಶ್ ಅವರು 4 ಬಾರಿಯ ವಿಶ್ವ ಚಾಂಪಿಯನ್ ಯೂಯ್ ಸುಸಾಕಿ, 4 ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಮರಿಯಾ ಸ್ಟಾಡ್ನಿಕ್ ಸವಾಲು ಎದುರಿಸಬೇಕಾಗಿದೆ.
ಅನ್ಶು ಮಲಿಕ್(ಮಹಿಳೆಯರ 57ಕೆಜಿ) ಹಾಗೂ ಅಮನ್ ಸೆಹ್ರಾವತ್(ಪುರುಷರ 57ಕೆಜಿ)ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಅನ್ಶು ಮಲಿಕ್ 2ನೇ ಬಾರಿ ಒಲಿಂಪಿಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಸೀನಿಯರ್ ಮಟ್ಟದಲ್ಲಿ ಗಮನಾರ್ಹ ಯಶಸ್ಸು ಕಂಡಿದ್ದಾರೆ.
57 ಕೆಜಿ ವಿಭಾಗದಲ್ಲಿ ಟೋಕಿಯೊ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಬದಲಿಗೆ ಆಡುತ್ತಿರುವ ಅಮನ್ ತನ್ನ ಪ್ರದರ್ಶನ ಮಟ್ಟ ಸುಧಾರಿಸಿಕೊಂಡಿದ್ದಾರೆ.
76 ಕೆಜಿ ಹೇವಿವೇಟ್ ವಿಭಾಗದಲ್ಲಿ ರೀತಿಕಾ ಮೊದಲ ಬಾರಿ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿದ್ದಾರೆ.
2008ರ ಬೀಜಿಂಗ್ ಒಲಿಂಪಿಕ್ಸ್ ನಂತರ ಒಲಿಂಪಿಕ್ಸ್ ನಲ್ಲಿ ಭಾರತದ ಕುಸ್ತಿಪಟುಗಳು ಪದಕಗಳನ್ನು ಗೆಲ್ಲುತ್ತಾ ಬಂದಿದ್ದಾರೆ. ಇದೀಗ ಆರು ಕುಸ್ತಿಪಟುಗಳ ಮೇಲೆ ಜಾಗತಿಕ ಮಟ್ಟದಲ್ಲಿ ಭಾರತದ ಕುಸ್ತಿ ಯಶಸ್ಸನ್ನು ಮುಂದುವರಿಸಬೇಕಾದ ಜವಾಬ್ದಾರಿ ಇದೆ.
ಭಾರತದ ಕುಸ್ತಿ ಸ್ಪರ್ಧೆಯ ವೇಳಾಪಟ್ಟಿ
ಆಗಸ್ಟ್ 5: ಮಹಿಳೆಯರ 68 ಕೆಜಿ(ನಿಶಾ ದಹಿಯಾ)
ಆಗಸ್ಟ್ 6: ಮಹಿಳೆಯರ 50 ಕೆಜಿ(ವಿನೇಶ್ ಫೋಗಟ್)
ಆಗಸ್ಟ್ 7: ಮಹಿಳೆಯರ 53 ಕೆಜಿ(ಅಂತಿಮ್ ಪಾಂಘಾಲ್)
ಆಗಸ್ಟ್ 8: ಪುರುಷರ ಫ್ರ್ರಿಸ್ಟೈಲ್ 57 ಕೆಜಿ(ಅಮನ್ ಸೆಹ್ರಾವತ್), ಮಹಿಳೆಯರ 57 ಕೆಜಿ(ಅನ್ಶು ಮಲಿಕ್)
ಆಗಸ್ಟ್ 10: ಮಹಿಳೆಯರ 76 ಕೆಜಿ(ರೀತಿಕಾ ಹೂಡಾ)







