ಭಾರತದ ಬ್ಯಾಡ್ಮಿಂಟನ್ ತಂಡದಿಂದ ಪ್ಯಾರಿಸ್ ನಲ್ಲಿ ಕಳಪೆ ಪ್ರದರ್ಶನ

PC : PTI
ಹೊಸದಿಲ್ಲಿ : ಹಿಂದಿನ ಮೂರು ಒಲಿಂಪಿಕ್ಸ್ನಲ್ಲಿ ಸತತವಾಗಿ ಪದಕಗಳನ್ನು ಗೆದ್ದಿರುವ ಭಾರತದ ಬ್ಯಾಡ್ಮಿಂಟನ್ ತಂಡವು ಪ್ಯಾರಿಸ್ ಗೇಮ್ಸ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ.
ಪ್ರತಿ ಸ್ಪರ್ಧಿಗಳಾದ ಪಿ.ವಿ. ಸಿಂಧು, ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಉಪಸ್ಥಿತಿಯಲ್ಲೂ ಒಂದೂ ಪದಕವನ್ನು ಗೆಲ್ಲುವಲ್ಲಿ ವಿಫಲವಾಗಿದೆ. ದಶಕಕ್ಕೂ ಅಧಿಕ ಕಾಲ ಯಶಸ್ಸಿನ ಓಟದ ನಂತರ ಇದು ದೊಡ್ಡ ಹಿನ್ನಡೆಯಾಗಿದೆ.
ಈ ಎಲ್ಲ ನಿರಾಶೆಯ ನಡುವೆ ನಾಲ್ಕನೇ ಸ್ಥಾನ ಪಡೆದಿದ್ದ ಲಕ್ಷ್ಯ ಸೇನ್ ಭಾರತಕ್ಕೆ ಆಶಾಕಿರಣವಾಗಿ ಗೋಚರಿಸಿದ್ದಾರೆ. ಸಿಂಧು ಸತತ 3ನೇ ಒಲಿಂಪಿಕ್ಸ್ ಪದಕ ಜಯಿಸುವ ವಿಶ್ವಾಸ ಮೂಡಿಸಿದರೆ, ಎಚ್.ಎಸ್. ಪ್ರಣಯ್ ದೀರ್ಘ ಸಮಯದ ನಂತರ ಚೊಚ್ಚಲ ಒಲಿಂಪಿಕ್ಸ್ ಆಡಿದ್ದರು. ಲಕ್ಷ್ಯ ಹಾಗೂ ಸಾತ್ವಿಕ್-ಚಿರಾಗ್ ಜೋಡಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾಗಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ ಗೆ ಸಜ್ಜಾಗಲು ಬ್ಯಾಡ್ಮಿಂಟನ್ ತಂಡವು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಮ್ ಸ್ಕೀಮ್(ಟಾಪ್ಸ್)ನಿಧಿಯ ಮೂಲಕ ಹಲವು ರಾಷ್ಟ್ರೀಯ ಶಿಬಿರಗಳು ಹಾಗೂ ವಿದೇಶಿ ಪ್ರವಾಸದ ವ್ಯವಸ್ಥೆ ಸಹಿತ ಸಾಕಷ್ಟು ಬೆಂಬಲ ಪಡೆದಿತ್ತು. ಭಾರತದ ಕ್ರೀಡಾ ಪ್ರಾಧಿಕಾರದ(ಸಾಯ್)ಮಿಶನ್ ಒಲಿಂಪಿಕ್ಸ್ ಸೆಲ್ ಸುಮಾರು 470 ಕೋಟಿ ರೂ.ಬಜೆಟ್ನ ಗಮನಾರ್ಹ ಭಾಗವನ್ನು ಬ್ಯಾಡ್ಮಿಂಟನ್ಗೆ ಮೀಸಲಿಟ್ಟಿತು.
ಆದರೆ ಪ್ಯಾರಿಸ್ನಲ್ಲಿನ ಫಲಿತಾಂಶ ಸರಕಾರ ಮಾಡಿರುವ ಹೂಡಿಕೆಯಿಂದ ಪ್ರಯೋಜನವಾಗಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ಸಾಕಷ್ಟು ಆರ್ಥಿಕ ಸಹಾಯವನ್ನು ಪಡೆದಿದ್ದ ಸಿಂಧು ಪ್ರಿ-ಕ್ವಾರ್ಟರ್ ಫೈನಲ್ ದಾಟಲು ವಿಫಲವಾಗಿದ್ದು, ಮೂರು ಒಲಿಂಪಿಕ್ಸ್ ಪದಕಗಳನ್ನು ಜಯಿಸಿದ ಭಾರತದ ಮೊದಲ ಅತ್ಲೀಟ್ ಎನಿಸಿಕೊಳ್ಳುವ ಅವಕಾಶದಿಂದ ವಂಚಿತರಾದರು.
ಲಕ್ಷ್ಯ ಸೇನ್ ಪ್ರದರ್ಶನದಿಂದ ನನಗೆ ಸ್ವಲ್ಪ ನಿರಾಶೆಯಾಗಿದೆ. ಬ್ಯಾಡ್ಮಿಂಟನ್ನಲ್ಲಿ ಒಂದೂ ಪದಕ ಗೆಲ್ಲದಿರುವುದಕ್ಕೆ ತುಂಬಾ ಬೇಸರವಾಗಿದೆ. ಸರಕಾರ, ಸಾಯ್ ಹಾಗೂ ಟಾಪ್ಸ್ ತಮ್ಮ ಕೈಲಾದಷ್ಟು ಮಾಡಿವೆ. ಕೆಲವು ಆಟಗಾರರು ಸ್ವಲ್ಪ ಜವಾಬ್ದಾರಿ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಲಕ್ಷ್ಯ ಸೇನ್ ಕೋಚ್ ಹಾಗೂ ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಪ್ರಕಾಶ್ ಪಡುಕೋಣೆ ಹೇಳಿದ್ದಾರೆ.
ಚಿನ್ನದ ಪದಕದ ಸ್ಪರ್ಧೆಯಲ್ಲಿದ್ದ ಮಾಜಿ ವಿಶ್ವದ ನಂ.1 ಸಾತ್ವಿಕ್ ಹಾಗೂ ಚಿರಾಗ್ ಅವರ ಆಘಾತಕಾರಿ ಸೋಲು ಒಲಿಂಪಿಕ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಂಡದ ನಿರಾಶೆಯನ್ನು ಹೆಚ್ಚಿಸಿತು.
ಭಾರತೀಯ ಸರಕಾರವು ಜರ್ಮನಿ ಹಾಗೂ ಫ್ರಾನ್ಸ್ ನಲ್ಲಿ ತರಬೇತಿ ನಡೆಸಲು ಸಿಂಧು ಹಾಗೂ ಲಕ್ಷ್ಯ ಸೇನ್ಗೆ ಕ್ರಮವಾಗಿ 26.60 ಲಕ್ಷ ಹಾಗೂ 9.33 ಲಕ್ಷ ರೂ. ಆರ್ಥಿಕ ನೆರವು ನೀಡಿತ್ತು.
ತನ್ನ ತರಬೇತಿಯ ವೇಳೆ 12 ಮಂದಿ ಸಹಾಯಕ ಸಿಬ್ಬಂದಿಯನ್ನು ಹೊಂದಿದ್ದ ಹೊರತಾಗಿಯೂ ಈ ಹಿಂದೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದ ಸಿಂಧುಗೆ ಚೀನಾದ ಹೀ ಬಿಂಗ್ ಜಿಯಾವೊರನ್ನು ಮಣಿಸಲು ಸಾಧ್ಯವಾಗಲಿಲ್ಲ.
ನಾಲ್ಕು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ನಲ್ಲಿ ಎರಡು ಪ್ರಶಸ್ತಿಗಳು ಹಾಗೂ ಪ್ರಮುಖ ಟೂರ್ನಿಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಜಯಿಸಿದ್ದ ಸಾತ್ವಿಕ್ ಹಾಗೂ ಚಿರಾಗ್ ಮಲೇಶ್ಯದ ಆರೊನ್ ಚಿಯಾ ಹಾಗೂ ಸೊಹ್ ವೂಯ್ ಯಿಕ್ ವಿರುದ್ಧ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಸೋತಿದ್ದರು.
ಸರಕಾರವು ಸಾತ್ವಿಕ್ ಹಾಗೂ ಚಿರಾಗ್ಗೆ ಪ್ಯಾರಿಸ್ ಒಲಿಂಪಿಕ್ಸ್ ತಯಾರಿಗಾಗಿ ಒಟ್ಟು 5.62 ಕೋಟಿ ರೂ. ವ್ಯಯಿಸಿದೆ. ಈ ಇಬ್ಬರ ಸೋಲಿನ ನಂತರ ಡೆನ್ಮಾರ್ಕ್ನ ಕೋಚ್ ಮಥಿಯಸ್ ಬೊಯ್ ರಾಜೀನಾಮೆ ನೀಡಿದ್ದರು.
ತರಬೇತಿಗೆ 1.8 ಕೋಟಿ ರೂ. ಸ್ವೀಕರಿಸಿದ್ದ ಏಶ್ಯನ್ ಗೇಮ್ಸ್ನಲ್ಲಿ ಕಂಚಿ ಪದಕ ವಿಜೇತ ಪ್ರಣಯ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಸೋತಿದ್ದರು.
1.5 ಕೋಟಿ ರೂ. ನೆರವು ಪಡೆದಿದ್ದ ಅಶ್ವಿನಿ ಪೊನ್ನಪ್ಪ ಹಾಗೂ ತನಿಶಾ ಕ್ರಾಸ್ಟೊ ಒಂದೂ ಪಂದ್ಯ ಗೆಲ್ಲದೆ ಗ್ರೂಪ್ ಹಂತದಲ್ಲೇ ನಿರ್ಗಮಿಸಿದ್ದರು.
ಈ ಎಲ್ಲ ಹಿನ್ನಡೆಯ ನಡುವೆ ಲಕ್ಷ್ಯ ಸೇನ್ ನಾಲ್ಕನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದರು.
2028ರ ಲಾಸ್ ಏಂಜಲೀಸ್ ಗೇಮ್ಸ್ ನಲ್ಲಿ 29ರ ಹರೆಯದ ಸಿಂಧು ತನ್ನ ಫಿಟ್ನೆಸ್ ಕಾಯ್ದುಕೊಳ್ಳುವ ಸಾಧ್ಯತೆ ಅನಿಶ್ಚಿತವಾಗಿದೆ. ಸಾತ್ವಿಕ್-ಚಿರಾಗ್ ಹಾಗೂ ಲಕ್ಷ್ಯ ಸೇನ್ ಪ್ಯಾರಿಸ್ ಒಲಿಂಪಿಕ್ಸ್ ನಿಂದ ಪಾಠ ಕಲಿಯಬಹುದು.







