ಸ್ವಪ್ನಿಲ್ ಕುಸಾಲೆಗೆ ರಾಷ್ಟ್ರಪತಿ, ಪ್ರಧಾನಮಂತ್ರಿ ಅಭಿನಂದನೆ

ಸ್ವಪ್ನಿಲ್ ಕುಸಾಲೆ | PC : PTI
ಹೊಸದಿಲ್ಲಿ : ಪುರುಷರ 50 ಮೀ. ರೈಫಲ್ 3 ಪೊಸಿಶನ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ ಭಾರತದ ಮೊದಲ ಶೂಟರ್ ಎನಿಸಿಕೊಂಡು ಇತಿಹಾಸ ನಿರ್ಮಿಸಿರುವ ಸ್ವಪ್ನಿಲ್ ಕುಸಾಲೆ ಸಾಧನೆಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತ ಸ್ವಪ್ನಿಲ್ ಕುಸಾಲೆಗೆ ಹೃತ್ಪೂರ್ವಕ ಅಭಿನಂದನೆಗಳು. ಪುರುಷರ 50 ಮೀ. ರೈಫಲ್ 3 ಪೊಸಿಶನ್ಸ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯನಾಗಿದ್ದಾರೆ. ಒಂದೇ ಒಲಿಂಪಿಕ್ ಗೇಮ್ಸ್ನಲ್ಲಿ ಭಾರತವು ಮೊದಲ ಬಾರಿ ಶೂಟಿಂಗ್ ಸ್ಪರ್ಧೆಗಳಲ್ಲಿ ಮೂರು ಪದಕಗಳನ್ನು ಜಯಿಸಿದೆ. ಇಡೀ ಶೂಟಿಂಗ್ ತಂಡವು ಭಾರತಕ್ಕೆ ಹೆಮ್ಮೆ ತಂದಿದೆ. ಮುಂಬರುವ ಸ್ಪರ್ಧೆಗಳಿಗೆ ನಮ್ಮ ಎಲ್ಲ ಆಟಗಾರರಿಗೆ ನಾನು ಶುಭ ಹಾರೈಸುವೆ ಎಂದು ರಾಷ್ಟ್ರಪತಿ ಮುರ್ಮು ಟ್ವೀಟಿಸಿದ್ದಾರೆ.
ಸ್ವಪ್ನಿಲ್ ಕುಸಾಲೆ ಅಮೋಘ ಪ್ರದರ್ಶನ ನೀಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಕುಸಾಲೆಗೆ ಅಭಿನಂದನೆಗಳು. ಅವರು ದಿಟ್ಟ ಪ್ರತಿರೋಧ ಒಡ್ಡಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿರುವ ಕಾರಣ ಈ ಪ್ರದರ್ಶನ ವಿಶೇಷವಾದುದು. ಪ್ರತಿಯೊಬ್ಬ ಭಾರತೀಯನು ಖುಷಿಯಾಗಿದ್ದಾನೆ ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.
ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಒಲಿಂಪಿಕ್ ಮೆಡಲಿಸ್ಟ್ ಹಾಗೂ ಭಾರತದ ಚೀಫ್ ಡಿ ಮಿಶನ್ ಗಗನ್ ನಾರಂಗ್, ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನದ ಪದಕ ಗೆದ್ದುಕೊಟ್ಟಿರುವ ಅಭಿನವ್ ಬಿಂದ್ರಾ, ಮಾಜಿ ಶೂಟರ್ ಹೀನಾ ಸಿಧು ಅಭಿನಂದನೆ ಸಲ್ಲಿಸಿದರು.







