ರ‍್ಯಾಂಕಿಂಗ್ ಸ್ವಿಸ್ ಓಪನ್ : ಟ್ರೀಸಾ, ಗಾಯತ್ರಿ ಜೋಡಿ ದ್ವಿತೀಯ ಸುತ್ತಿಗೆ
ಬಾಸೆಲ್(ಸ್ವಿಟ್ಜರ್ಲ್ಯಾಂಡ್): ಭಾರತದ ಶಟ್ಲರ್ ಗಳಾದ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಸ್ವಿಸ್ ಓಪನ್ ಸೂಪರ್ 300 ಟೂರ್ನಮೆಂಟ್ ನಲ್ಲಿ ಅಮೆರಿಕದ ಅನ್ನಿ ಕ್ಸೂ ಹಾಗೂ ಕೆರ್ರಿ ಕ್ಸೂ ವಿರುದ್ಧ ನೇರ ಗೇಮ್ ಗಳ ಅಂತರದಿಂದ ಜಯ ಸಾಧಿಸಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಕಳೆದ ವಾರ ಆಲ್ ಇಂಗ್ಲೆಂಡ್ ಓಪನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಸೋತು ನಿರ್ ಗಮಿಸಿರುವ ಟ್ರೀಸಾ ಹಾಗೂ ಗಾಯತ್ರಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 39 ನಿಮಿಷಗಳ ಹೋರಾಟದಲ್ಲಿ ಅಮೆರಿಕದ ಜೋಡಿಯನ್ನು 21-15, 21-12 ಗೇಮ್ ಗಳ ಅಂತರದಿಂದ ಸೋಲಿಸಿದರು.
ಮಹಿಳೆಯರ ಡಬಲ್ಸ್ ಪ್ರಧಾನ ಸುತ್ತಿನಲ್ಲಿ ಆಡಿರುವ ಭಾರತದ ಇತರ ಮೂವರು ಜೋಡಿ ಮೊದಲ ಸುತ್ತಿನಲ್ಲಿ ಸೋತು ನಿರ್ ಗಮಿಸಿದ್ದಾರೆ.
ಅಶ್ವಿನಿ ಭಟ್ ಹಾಗೂ ಶಿಖಾ ಗೌತಮ್ ಹಾಂಕಾಂಗ್ ನ 4ನೇ ಶ್ರೇಯಾಂಕದ ಯೆವುಂಗ್ ಟಿಂಗ್ ಹಾಗೂ ಯೆವುಂಗ್ ಲ್ಯಾಮ್ ವಿರುದ್ಧ 13-21, 21-16, 14-21 ಅಂತರದಿಂದ ಸೋತಿದ್ದಾರೆ.
ಋತುಪರ್ಣ ಪಾಂಡ ಹಾಗೂ ಶ್ವೇತಪರ್ಣ ಪಾಂಡ ಇಂಡೋನೇಶ್ಯದ ಅಗ್ರ ಶ್ರೇಯಾಂಕದ ಅಪ್ರಿಯಾನಿ ರಹಾಯು ಹಾಗೂ ಸಿಟಿ ಫಡಿಯಾ ಸಿಲ್ವ ಎದುರು 4-21, 6-21 ಹೀನಾಯವಾಗಿ ಸೋತಿದ್ದಾರೆ.
ಸಿಮ್ರಾನ್ ಸಿಂಘಿ ಹಾಗೂ ರಿತಿಕಾ ಥಾಕರ್ ಇಂಡೋನೇಶ್ಯದ ಟ್ರಿಯಾ ಮಯಸರಿ ಹಾಗೂ ರಿಬ್ಕಾ ಸುಗಿಯಾರ್ಟೊ ವಿರುದ್ಧ 17-21, 7-21 ಗೇಮ್ ಗಳ ಅಂತರದಿಂದ ಸೋಲನುಭವಿಸಿದರು.







