ಭಾರತದ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ 14ನೇ ಆಟಗಾರ ಆರ್.ಅಶ್ವಿನ್

ಆರ್. ಅಶ್ವಿನ್ | Photo: NDTV
ಹೊಸದಿಲ್ಲಿ: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್ ನಲ್ಲಿ ಇಂಗ್ಲೆಂಡ್ ವಿರುದ್ಧ ಗುರುವಾರ ಆರಂಭವಾದ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾಗವಹಿಸುವ ಮೂಲಕ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಭಾರತದ ಪರ 100 ಟೆಸ್ಟ್ ಪಂದ್ಯಗಳನ್ನಾಡಿದ 14ನೇ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.
ಅಶ್ವಿನ್ 2011ರಲ್ಲಿ ಹೊಸದಿಲ್ಲಿಯಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಮೊದಲ ಪಂದ್ಯ ಆಡಿ 12 ವರ್ಷ, 4 ತಿಂಗಳ ನಂತರ 100 ಟೆಸ್ಟ್ ಮೈಲಿಗಲ್ಲು ತಲುಪಿದ ತಮಿಳುನಾಡಿನ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. 37ರ ವಯಸ್ಸಿನ ಅಶ್ವಿನ್ ಈ ಸಾಧನೆ ಮಾಡಿದ ಭಾರತದ ಹಿರಿಯ ಆಟಗಾರನಾಗಿದ್ದಾರೆ.
ರಾಜ್ಕೋಟ್ ನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ಆಟಗಾರ ಝಾಕ್ ಕ್ರಾವ್ಲೆ ವಿಕೆಟ್ ಉರುಳಿಸಿದ್ದ ಆಫ್ ಸ್ಪಿನ್ನರ್ ಅಶ್ವಿನ್ ಅವರು ಅನಿಲ್ ಕುಂಬ್ಳೆ ನಂತರ 500 ಟೆಸ್ಟ್ ವಿಕೆಟ್ ಗಳನ್ನು ಪಡೆದ ಭಾರತದ ಎರಡನೇ ಬೌಲರ್ ಎನಿಸಿಕೊಂಡಿದ್ದರು.
ಅಶ್ವಿನ್ 23.19ರ ಸರಾಸರಿಯಲ್ಲಿ, 51.3ರ ಸ್ಟ್ರೈಕ್-ರೇಟ್ ನಲ್ಲಿ 507 ಟೆಸ್ಟ್ ವಿಕೆಟ್ ಗಳನ್ನು ಪಡೆದಿದ್ದಾರೆ. ಆಲ್ರೌಂಡರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ಐದು ಶತಕಗಳ ಸಹಿತ ಒಟ್ಟು 3,309 ರನ್ ಗಳಿಸಿದ್ದಾರೆ.
*100 ಟೆಸ್ಟ್ ಪಂದ್ಯವನ್ನಾಡಿದ ಭಾರತದ ಆಟಗಾರರು
1 ಸುನೀಲ್ ಗವಾಸ್ಕರ್
2 ದಿಲಿಪ್ ವೆಂಗ್ಸರ್ಕಾರ್
3 ಕಪಿಲ್ದೇವ್
4 ಸಚಿನ್ ತೆಂಡುಲ್ಕರ್
5 ಅನಿಲ್ ಕುಂಬ್ಳೆ
6 ರಾಹುಲ್ ದ್ರಾವಿಡ್
7 ಸೌರವ್ ಗಂಗುಲಿ
8 ವಿವಿಎಸ್ ಲಕ್ಷ್ಮಣ್
9 ವೀರೇಂದ್ರ ಸೆಹ್ವಾಗ್
10 ಹರ್ಭಜನ್ ಸಿಂಗ್
11 ಇಶಾಂತ್ ಶರ್ಮಾ
12 ವಿರಾಟ್ ಕೊಹ್ಲಿ
13 ಚೇತೇಶ್ವರ ಪೂಜಾರ
14 ಆರ್.ಅಶ್ವಿನ್







