ರೋಹನ್ ಬೋಪಣ್ಣ- ಮ್ಯಾಥ್ಯೂ ಎಬ್ಡೆನ್ ಜೋಡಿ ಸೆಮಿಫೈನಲ್ ಗೆ
ಮಯಾಮಿ ಓಪನ್ ಟೆನಿಸ್ ಪಂದ್ಯಾವಳಿ

ರೋಹನ್ ಬೋಪಣ್ಣ , ಮ್ಯಾಥ್ಯೂ ಎಬ್ಡೆನ್ | Photo: X
ಮಯಾಮಿ (ಅಮೆರಿಕ) : ಮಯಾಮಿ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಡಬಲ್ಸ್ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯದ ಜೋಡಿ ಮ್ಯಾಥ್ಯೂ ಎಬ್ಡೆನ್ ಸೆಮಿಫೈನಲ್ ತಲುಪಿದ್ದಾರೆ. ಅವರು ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ನ ಸೆಮ್ ವೆರ್ಬೀಕ್ ಮತ್ತು ಆಸ್ಟ್ರೇಲಿಯದ ಜಾನ್ ಪ್ಯಾಟ್ರಿಕ್ ಸ್ಮಿತ್ ಜೋಡಿಯನ್ನು 3-6, 7-6(4), 10-7 ಸೆಟ್ಗಳಿಂದ ಸೋಲಿಸಿದರು.
ಇದು ರೋಹನ್-ಮ್ಯಾಥ್ಯೂ ಜೋಡಿಯ ಈ ವರ್ಷದ ಮೂರನೇ ಪುರುಷರ ಡಬಲ್ಸ್ ಸೆಮಿಫೈನಲ್ ಆಗಿದೆ. ಈ ವರ್ಷದ ಆರಂಭದಲ್ಲಿ ಭಾರತ-ಆಸ್ಟ್ರೇಲಿಯ ಜೋಡಿಯು ಆಸ್ಟ್ರೇಲಿಯ ಓಪನ್ ಪ್ರಶಸ್ತಿ ಗೆದ್ದಿದೆ. ಅದೂ ಅಲ್ಲದೆ, ಅವರು ಜನವರಿಯಲ್ಲಿ ನಡೆದ ಅಡಿಲೇಡ್ ಓಪನ್ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಅವರು ಫೈನಲ್ನಲ್ಲಿ ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್ನ ಜೋ ಸ್ಯಾಲಿಸ್ಬರಿ ಜೋಡಿಯ ವಿರುದ್ಧ ಪರಾಭವಗೊಂಡರು.
ರೋಹನ್ ಮತ್ತು ಮ್ಯಾಥ್ಯೂ ಮೊದಲ ಸೆಟ್ನಲ್ಲಿ ಹಲವಾರು ಅನ್ಫೋರ್ಸ್ಡ್ ಎರರ್ ಗಳನ್ನು ಮಾಡಿ ಮೊದಲ ಸೆಟ್ಟನ್ನು ಕಳೆದುಕೊಂಡರಾದರೂ, ಬಳಿಕ ಪ್ರತಿ ಹೋರಾಟ ನೀಡಿ ವಿಜಯದತ್ತ ದಾಪುಗಾಲಿಟ್ಟರು.
ಈ ವಿಜಯದೊಂದಿಗೆ, ಎರಡನೇ ವಿಶ್ವ ರ್ಯಾಂಕಿಂಗ್ನ 44 ವರ್ಷದ ಬೋಪಣ್ಣ ಎಟಿಪಿ ಡಬಲ್ಸ್ ರ್ಯಾಂಕಿಂಗ್ ನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಮತ್ತು ಜುಲೈ-ಆಗಸ್ಟ್ ನಲ್ಲಿ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ನೇರ ಪ್ರವೇಶ ಪಡೆಯಲಿದ್ದಾರೆ.
ಈ ಪಂದ್ಯಾವಳಿಯಲ್ಲಿ ಒಂದನೇ ಶ್ರೇಯಾಂಕ ಹೊಂದಿರುವ ಬೋಪಣ್ಣ-ಎಬ್ಡೆನ್ ಜೋಡಿಯು ಮೊದಲ ಸೆಟ್ನಲ್ಲಿ ಹಿನ್ನಡೆ ಅನುಭವಿಸಿತು. ಆದರೆ, ಎರಡನೇ ಸೆಟ್ನಲ್ಲಿ ಮಹತ್ವದ ಸಂದರ್ಭಗಳಲ್ಲಿ ತೀವ್ರ ಪ್ರತಿ ಹೋರಾಟ ನೀಡಿ ಆ ಸೆಟ್ಟನ್ನು ಗೆದ್ದರು. ಹಾಗಾಗಿ, ಪಂದ್ಯವು ಟೈಬ್ರೇಕರ್ ಸೆಟ್ಗೆ ವಿಸ್ತರಿಸಿತು. ಅದರಲ್ಲಿ ಭಾರತ-ಆಸ್ಟ್ರೇಲಿಯ ಜೋಡಿಯು ವಿಜಯಿಯಾಗಿ ಹೊರಹೊಮ್ಮಿತು.







