ಹೆಚ್ಚು ವಾರಗಳ ಕಾಲ ವಿಶ್ವದ ನಂ.1 ರ್ಯಾಂಕಿಂಗ್ ಕಾಯ್ದುಕೊಂಡು ಸೈನಾ ದಾಖಲೆ ಮುರಿದ ಸಾತ್ವಿಕ್-ಚಿರಾಗ್

ಸಾತ್ವಿಕ್-ಚಿರಾಗ್ | Photo: X
ಹೊಸದಿಲ್ಲಿ: ಭಾರತದ ಡೈನಾಮಿಕ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ನ (BWF)ವರ್ಲ್ಡ್ ರ್ಯಾಂಕಿಂಗ್ ನಲ್ಲಿ ಹೆಚ್ಚು ವಾರಗಳ ಕಾಲ ಅಗ್ರ ಸ್ಥಾನ ಉಳಿಸಿಕೊಂಡಿದ್ದ ಭಾರತದ ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ರ ದಾಖಲೆಯನ್ನು ಮುರಿದು ಇತಿಹಾಸ ನಿರ್ಮಿಸಿದರು.
ಬ್ಯಾಡ್ಮಿಂಟನ್ ಅಂಗಣದಲ್ಲಿ ತನ್ನ ಶಕ್ತಿಶಾಲಿ ಆಟ ಹಾಗೂ ತಾಂತ್ರಿಕತೆಯ ಮೂಲಕ ಹೆಸರುವಾಸಿಯಾಗಿರುವ ಸಾತ್ವಿಕ್ ಹಾಗೂ ಚಿರಾಗ್ 10 ವಾರಗಳಿಂದ ನಂ.1 ರ್ಯಾಂಕಿಂಗ್ ನಲ್ಲಿದ್ದಾರೆ. 9 ವಾರಗಳ ಕಾಲ 2015ರ ಆಗಸ್ಟ್ 18ರಿಂದ ಅಕ್ಟೋಬರ್ 21ರ ತನಕ ನಂ.1 ಸ್ಥಾನದಲ್ಲಿದ್ದ ನೆಹ್ವಾಲ್ ರ ಹಿಂದಿನ ದಾಖಲೆಯನ್ನು ಸಾತ್ವಿಕ್-ಚಿರಾಗ್ ಮುರಿದಿದ್ದಾರೆ.
ಪ್ರತಿಷ್ಠಿತ ಬಿಡಬ್ಲ್ಯುಎಫ್ ಟೂರ್ನಮೆಂಟ್ ಗಳು ಹಾಗೂ ಚಾಂಪಿಯನ್ ಶಿಪ್ ಗಳಲ್ಲಿ ಜಯ ದಾಖಲಿಸುವ ಮೂಲಕ ಸಾತ್ವಿಕ್ ಹಾಗೂ ಚಿರಾಗ್ 2022ರಲ್ಲಿ ತಮ್ಮ ಪಯಣ ಆರಂಭಿಸಿದ್ದರು. ಈ ವರ್ಷ ಚೀನಾ ಓಪನ್, ಮಲೇಶ್ಯ ಓಪನ್ ಹಾಗೂ ಇಂಡಿಯಾ ಓಪನ್ ನಲ್ಲಿ ಅಮೋಘ ಪ್ರದರ್ಶನ ನೀಡಿ ಅಗ್ರ ಸ್ಥಾನಕ್ಕೇರಿದ್ದಾರೆ. ಫ್ರೆಂಚ್ ಓಪನ್ ಜಯಿಸುವ ಮೂಲಕ ಮಹತ್ವದ ಸಾಧನೆ ಮಾಡಿದರು. ಈ ಮೂಲಕ ವಿಶ್ವದ ನಂ.1 ಪುರುಷರ ಡಬಲ್ಸ್ ಜೋಡಿ ಎಂಬ ಹಿರಿಮೆಯನ್ನು ಹೆಚ್ಚಿಸಿಕೊಂಡರು.
ಸದ್ಯ ಸಾತ್ವಿಕ್ ಹಾಗೂ ಚಿರಾಗ್ ಲೀಡರ್ಬೋರ್ಡ್ ನಲ್ಲಿ 1,02,303 ಪಾಯಿಂಟ್ಸ್ ಹೊಂದಿದ್ದಾರೆ. ಎರಡನೇ ರ್ಯಾಂಕಿನಲ್ಲಿರುವ ದಕ್ಷಿಣ ಕೊರಿಯಾದ ಜೋಡಿ ಕಾಂಗ್ ಮಿನ್ ಹಿಯುಕ್ ಹಾಗೂ ಸೆವೊ ಸೆವುಂಗ್ ಜಾ ವಿರುದ್ಧ 5,000 ಪಾಯಿಂಟ್ಸ್ ಮುನ್ನಡೆಯಲ್ಲಿದ್ದಾರೆ.
ಈ ಸಾಧನೆಯು ಸಾತ್ವಿಕ್ ಹಾಗೂ ಚಿರಾಗ್ ಅವರ ಮಹತ್ವದ ಪಯಣದಲ್ಲಿ ಮತ್ತೊಂದು ಅಧ್ಯಾಯವಾಗಿದೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಹಾಂಗ್ಝೌನಲ್ಲಿ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ ನಂತರ ಬಿಡಬ್ಲ್ಯುಎಫ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ ಭಾರತದ ಮೊದಲ ಡಬಲ್ಸ್ ಜೋಡಿ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದರು.
ಕೇವಲ 3 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದರು. ಇದೀಗ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಾರಮ್ಯ ಮೆರೆದು ಅಗ್ರಸ್ಥಾನದಲ್ಲಿದ್ದಾರೆ.
ಈ ಸಾಧನೆಯೊಂದಿಗೆ ಸಾತ್ವಿಕ್ ಹಾಗೂ ಚಿರಾಗ್ ಭಾರತದ ಇತರ ಬ್ಯಾಡ್ಮಿಂಟನ್ ದಿಗ್ಗಜರೊಂದಿಗೆ ಸ್ಥಾನ ಪಡೆದಿದ್ದಾರೆ. 1980ರಲ್ಲಿ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಪ್ರಶಸ್ತಿ ಜಯಿಸಿದ್ದ ಲೆಜೆಂಡರಿ ಶಟ್ಲರ್ ಪ್ರಕಾಶ್ ಪಡುಕೋಣೆ ಆ ಕಾಲದಲ್ಲಿ ಅಗ್ರ ಆಟಗಾರರಾಗಿ ಹೊರಹೊಮ್ಮಿದ್ದರು.







