ಎರಡನೇ ಟೆಸ್ಟ್: ಹೇಝಲ್ವುಡ್, ಮಿಚೆಲ್ ಸ್ಟಾರ್ಕ್ ಪ್ರಹಾರ; ನ್ಯೂಝಿಲ್ಯಾಂಡ್ 162 ರನ್ ಗೆ ಆಲೌಟ್

Photo: PTI
ಕ್ರೈಸ್ಟ್ಚರ್ಚ್: ಆಸ್ಟ್ರೇಲಿಯದ ಜೋಶ್ ಹೇಝಲ್ವುಡ್(5-31) ಹಾಗೂ ಮಿಚೆಲ್ ಸ್ಟಾರ್ಕ್(3-59)ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ನ್ಯೂಝಿಲ್ಯಾಂಡ್ ತಂಡ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 162 ರನ್ಗೆ ಆಲೌಟಾಗಿದೆ. ಮಾಜಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ನಾಯಕ ಟಿಮ್ ಸೌಥಿ ಪಾಲಿಗೆ ಇದು 100ನೇ ಟೆಸ್ಟ್ ಪಂದ್ಯವಾಗಿದೆ.
ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ಕಿವೀಸ್ ಪರ ವಿಲಿಯಮ್ಸನ್ 17 ರನ್ ಗಳಿಸಿ ಹೇಝಲ್ವುಡ್ ಗೆ ಔಟಾದರೆ, ಸೌಥಿ 26 ರನ್ ಗಳಿಸಿದ್ದಲ್ಲದೆ, ಮ್ಯಾಟ್ ಹೆನ್ರಿ(29 ರನ್)ಅವರೊಂದಿಗೆ 9ನೇ ವಿಕೆಟ್ ಗೆ 55 ರನ್ ಜೊತೆಯಾಟದಲ್ಲಿ ಭಾಗಿಯಾದರು. ಇದು ಕಿವೀಸ್ ಇನಿಂಗ್ಸ್ ನಲ್ಲಿ ದಾಖಲಾದ ಗರಿಷ್ಠ ರನ್ ಜೊತೆಯಾಟವಾಗಿದೆ.
ಶುಕ್ರವಾರ ಮೊದಲ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ತಂಡ ತನ್ನ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 124 ರನ್ ಗಳಿಸಿದೆ. ಮಾರ್ನಸ್ ಲಾಬುಶೇನ್(45 ರನ್)ಹಾಗೂ ನೈಟ್ವಾಚ್ಮ್ಯಾನ್ ನಾಥನ್ ಲಿಯೊನ್(1 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸ್ಟೀವ್ ಸ್ಮಿತ್(11 ರನ್) ಹಾಗೂ ಉಸ್ಮಾನ್ ಖ್ವಾಜಾ(16 ರನ್) ಕ್ರಮವಾಗಿ ಬೆನ್ ಸೀಯರ್ಸ್ ಹಾಗೂ ಹೆನ್ರಿಗೆ ವಿಕೆಟ್ ಒಪ್ಪಿಸಿದಾಗ ಆಸ್ಟ್ರೇಲಿಯ 32 ರನ್ಗೆ 2 ವಿಕೆಟ್ಗಳನ್ನು ಕಳೆದುಕೊಂಡಿತು. ಲಾಬುಶೇನ್ ಹಾಗೂ ಮೊದಲ ಟೆಸ್ಟ್ನಲ್ಲಿ ಶತಕ ಗಳಿಸಿದ್ದ ಕ್ಯಾಮರೂನ್ ಗ್ರೀನ್(25 ರನ್)3ನೇ ವಿಕೆಟ್ಗೆ 49 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಟ್ರಾವಿಸ್ ಹೆಡ್(21 ರನ್) ಹೆನ್ರಿಗೆ ವಿಕೆಟ್ ಒಪ್ಪಿಸಿದಾಗ ಆಸ್ಟ್ರೇಲಿಯ 107 ರನ್ಗೆ 4ನೇ ವಿಕೆಟ್ ಕಳೆದುಕೊಂಡಿತು. ಮೊದಲ ದಿನದಾಟದಂತ್ಯಕ್ಕೆ ಹೆನ್ರಿ 39 ರನ್ಗೆ 3 ವಿಕೆಟ್ಗಳನ್ನು ಪಡೆದಿದ್ದಾರೆ.ಲಾಬುಶೇನ್ ಅವರ ಹೋರಾಟಕಾರಿ ಇನಿಂಗ್ಸ್ನಿಂದಾಗಿ ಆಸ್ಟ್ರೇಲಿಯ ಮೊದಲ ದಿನದಾಟದಲ್ಲಿ ಒತ್ತಡದಿಂದ ಪಾರಾಗಿದೆ.
ಇದಕ್ಕೂ ಮೊದಲು ನಿಖರವಾದ ಲೈನ್ ಹಾಗೂ ಲೆಂಗ್ತ್ನಲ್ಲಿ ಬೌಲಿಂಗ್ ಮಾಡಿದ ಹೇಝಲ್ವುಡ್ ನ್ಯೂಝಿಲ್ಯಾಂಡ್ನ ಅಗ್ರ ಸರದಿಯ ಬ್ಯಾಟರ್ಗಳಿಗೆ ಸವಾಲಾದರು. ವಿಲಿಯಮ್ಸನ್, ಟಾಮ್ ಲ್ಯಾಥಮ್(38 ರನ್), ರಚಿನ್ ರವೀಂದ್ರ(4 ರನ್), ಡ್ಯಾರಿಲ್ ಮಿಚೆ(4 ರನ್) ಹಾಗೂ ಹೆನ್ರಿ(29 ರನ್) ವಿಕೆಟ್ಗಳನ್ನು ಪಡೆದಿರುವ ಹೇಝಲ್ವುಡ್ ವೃತ್ತಿಜೀವನದಲ್ಲಿ 12ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು.
ಮಿಚೆಲ್ ಸ್ಟಾರ್ಕ್ ಅವರು ವಿಲ್ ಯಂಗ್(14 ರನ್), ಗ್ಲೆನ್ ಫಿಲಿಪ್ಸ್(2 ರನ್) ಹಾಗೂ ಸ್ಕಾಟ್ ಕುಗ್ಗೆಲಿನ್(0)ವಿಕೆಟ್ಗಳನ್ನು ಉರುಳಿಸಿ ಕಿವೀಸ್ ಸಂಕಷ್ಟ ಹೆಚ್ಚಿಸಿದರು. ಫಿಲಿಪ್ಸ್ ವಿಕೆಟನ್ನು ಉರುಳಿಸಿದ ಸ್ಟಾರ್ಕ್ ಅವರು 356ನೇ ಟೆಸ್ಟ್ ವಿಕೆಟ್ ಪಡೆದು ಆಸ್ಟೇಲಿಯದ ಲೆಜೆಂಡ್ ಡೆನ್ನಿಸ್ ಲಿಲ್ಲಿ ದಾಖಲೆಯನ್ನು ಮುರಿದರು.
ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಜಯಿಸಿ ನ್ಯೂಝಿಲ್ಯಾಂಡ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದರು. ಮೊದಲ ಒಂದು ಗಂಟೆಯ ಆಟದ ಮುಗಿದ ನಂತರ ನ್ಯೂಝಿಲ್ಯಾಂಡ್ ವಿಕೆಟ್ ನಷ್ಟವಿಲ್ಲದೆ 35 ರನ್ ಗಳಿಸಿದ್ದು, ಕಮಿನ್ಸ್ ಬೌಲಿಂಗ್ ನಿರ್ಧಾರದ ಬಗ್ಗೆ ಪ್ರಶ್ನೆ ಎದ್ದಿತ್ತು. ಕಮಿನ್ಸ್ ಮೂವರು ಪ್ರಮುಖ ವೇಗಿಗಳಳ ಜೊತೆಗೆ 12ನೇ ಓವರ್ನಲ್ಲಿ ಸ್ಪಿನ್ನರ್ ನಾಥನ್ ಲಿಯೊನ್ರನ್ನು ದಾಳಿಗಿಳಿಸಿದರು. ಆದರೆ ಹಾಗ್ಲೆ ಓವಲ್ ಪಿಚ್ನಲ್ಲಿ ಕಮಿನ್ಸ್ ನಿರೀಕ್ಷಿಸಿದ ಫಲಿತಾಂಶ ಬರಲಿಲ್ಲ.
ಮೊದಲ ಒಂದು ಗಂಟೆಯ ಆಟ ಮುಗಿದ ನಂತರ ಪಿಚ್ ಬೌಲರ್ಗಳಿಗೆ ನೆರವಾಗಲಾರಂಭಿಸಿದ್ದು, ಹೇಝಲ್ವುಡ್ ಇದರ ಸಂಪೂರ್ಣ ಲಾಭ ಪಡೆದರು.
ಆಸ್ಟ್ರೇಲಿಯದ ವಿಕೆಟ್ಕೀಪರ್ ಅಲೆಕ್ಸ್ ಕಾರೆ ವಿಕೆಟ್ಹಿಂದುಗಡೆ ಇನಿಂಗ್ಸ್ನಲ್ಲಿ ಐದು ಕ್ಯಾಚ್ಗಳನ್ನು ಪಡೆದರು. ಹೇಝಲ್ವುಡ್ ಬೌಲಿಂಗ್ನಲ್ಲಿ ಮೂರು ಬಾರಿ ಈ ಸಾಧನೆ ಮಾಡಿದರು.
ನ್ಯೂಝಿಲ್ಯಾಂಡ್ ತಂಡ ವೆಲ್ಲಿಂಗ್ಟನ್ನಲ್ಲಿ 172 ರನ್ನಿಂದ ಸೋತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 179 ಹಾಗೂ 196 ರನ್ ಗಳಿಸಿ ಸರ್ವಪತನಗೊಂಡಿತ್ತು. ಈಗ ಮತ್ತೊಮ್ಮೆ 200 ರನ್ನೊಳಗೆ ಗಂಟುಮೂಟೆ ಕಟ್ಟಿರುವ ಕಿವೀಸ್ ಪರ ಸರಣಿ ಸೋಲಿನ ಭೀತಿಯಲ್ಲಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್: 162 ರನ್ಗೆ ಆಲೌಟ್
(ಲ್ಯಾಥಾಮ್ 38, ಮ್ಯಾಟ್ ಹೆನ್ರಿ 29, ಸೌಥಿ 26, ಜೋಶ್ ಹೇಝಲ್ವುಡ್ 5-31, ಮಿಚೆಲ್ ಸ್ಟಾರ್ಕ್ 3-59)
ಆಸ್ಟ್ರೇಲಿಯ ಮೊದಲ ಇನಿಂಗ್ಸ್: 124/4
(ಲಾಬುಶೇನ್ ಔಟಾಗದೆ 45, ಕ್ಯಾಮರೂನ್ ಗ್ರೀನ್ 25, ಟ್ರಾವಿಸ್ ಹೆಡ್ 21, ಮ್ಯಾಟ್ ಹೆನ್ರಿ 3-39)







