ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಸಾತ್ವಿಕ್-ಚಿರಾಗ್ ಜೋಡಿ ಮೊದಲ ಸುತ್ತಿನಲ್ಲೇ ಹೊರಗೆ

Photo: BAI
ಸಿಂಗಾಪುರ: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ನಲ್ಲಿ ಮಂಗಳವಾರ ಮೊದಲ ಸುತ್ತಿನಲ್ಲೇ ಭಾರತೀಯ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಹೊರಬಿದ್ದಿದ್ದಾರೆ. ವಿಶ್ವದ ನಂಬರ್ ವನ್ ಜೋಡಿಯನ್ನು 34ನೇ ವಿಶ್ವ ರ್ಯಾಂಕಿಂಗ್ನ ಡೆನ್ಮಾರ್ಕ್ನ ಡೇನಿಯಲ್ ಲಂಜಾರ್ಡ್ ಮತ್ತು ಮ್ಯಾಡ್ಸ್ ವೆಸ್ಟರ್ಗಾರ್ಡ್ 22-20, 21-18 ಗೇಮ್ಗಳಿಂದ ಸೋಲಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಫೇವರಿಟ್ ಗಳಲ್ಲಿ ಒಂದಾಗಿರುವ ಈ ಜೋಡಿಯು ಕೇವಲ 47 ನಿಮಿಷಗಳಲ್ಲಿ ಸೋಲೊಪ್ಪಿಕೊಂಡಿತು.
ಈ ತಿಂಗಳ ಆರಂಭದಲ್ಲಿ ಥಾಯ್ಲೆಂಡ್ ಓಪನ್ ಪ್ರಶಸ್ತಿ ಗೆದ್ದಿರುವ ಭಾರತೀಯ ಜೋಡಿಯು ಸಿಂಗಾಪುರದಲ್ಲಿ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿರುವುದು ಅಭಿಮಾನಿಗಳಿಗೆ ಆಘಾತಕಾರಿಯಾಗಿದೆ.
ಅದೇ ವೇಳೆ, ಸಿಂಗಲ್ಸ್ ನಲ್ಲೂ ಭಾರತಕ್ಕೆ ನಿರಾಶೆ ಕಾದಿತ್ತು. ಆಕರ್ಷಿ ಕಶ್ಯಪ್ ಮತ್ತು ಪ್ರಿಯಾಂಶು ರಾಜವತ್ ಕೂಡ ಮೊದಲ ಸುತ್ತಿನಲ್ಲೇ ಹೊರಬಿದ್ದರು.
ಮಹಿಳೆಯರ ಸಿಂಗಲ್ಸ್ ನಲ್ಲಿ, 41ನೇ ವಿಶ್ವ ರ್ಯಾಂಕಿಂಗ್ ನ ಆಕರ್ಷಿ ಕಶ್ಯಪ್ ರನ್ನು ಥಾಯ್ಲೆಂಡ್ ನ 42ನೇ ವಿಶ್ವ ರ್ಯಾಂಕಿಂಗ್ ನ ಪೊರ್ನ್ಪಿಚ ಚೋಕೀವೊಂಗ್ 21-7, 21-15 ಗೇಮ್ಗಳಿಂದ ಹಿಮ್ಮೆಟ್ಟಿಸಿದರು.
ಪುರುಷರ ಸಿಂಗಲ್ಸ್ನಲ್ಲಿ, ಪ್ರಿಯಾಂಶು ರಾಜವತ್ರನ್ನು ಹಾಂಕಾಂಗ್ನ ಲೀ ಚೋಕ್ ಯಿಯು 23-21, 21-19 ಗೇಮ್ಗಳಿಂದ ಮಣಿಸಿದರು.
ಮಹಿಳೆಯರ ಡಬಲ್ಸ್ ನಲ್ಲೂ ಭಾರತದ ಋತುಪರ್ಣ ಪಾಂಡ ಮತ್ತು ಶ್ವೇತಪರ್ಣ ಪಾಂಡ ಸೋಲನುಭವಿಸಿದರು. ಅವರನ್ನು ಚೈನೀಸ್ ತೈಪೆಯ ಚಾಂಗ್ ಚಿಂಗ್ ಹುಯಿ ಮತ್ತು ಯಾಂಗ್ ಚಿನ್ ಟುನ್ 21-12, 12-21, 21-13 ಗೇಮ್ಗಳಿಂದ ಸೋಲಿಸಿದರು.
ಮಿಶ್ರ ಡಬಲ್ಸ್ ನಲ್ಲಿ, ಭಾರತದ ಆಶಿತ್ ಸೂರ್ಯ ಮತ್ತು ಅಮೃತಾ ಪ್ರಮುತೇಶ್ ಹಾಂಕಾಂಗ್ನ ಲೀ ಚುನ್ ಹೈ ರೆಜಿನಾಲ್ಡ್ ಮತ್ತು ಎಂಗ್ ತ್ಸಝ್ ಯಾವು ಜೋಡಿ ವಿರುದ್ಧ 8-21, 17-21 ಗೇಮ್ಗಳಿಂದ ಸೋಲನುಭವಿಸಿದರು.







