ಸ್ಕೀಟ್ ಮಿಕ್ಸೆಡ್ ಟೀಮ್ ಇವೆಂಟ್ | ಕಂಚಿನ ಪದಕ ಪಂದ್ಯದಲ್ಲಿ ಮಹೇಶ್ವರಿ ಚೌಹಾಣ್-ಅನಂತ್ ಜೀತ್ ಸಿಂಗ್ ಗೆ ಸೋಲು

ಅನಂತ್ ಜೀತ್ ಸಿಂಗ್ , ಮಹೇಶ್ವರಿ ಚೌಹಾಣ್ | PC : PTI
ಪ್ಯಾರಿಸ್: ಭಾರತದ ಶೂಟರ್ಗಳಾದ ಮಹೇಶ್ವರಿ ಚೌಹಾಣ್ ಹಾಗೂ ಅನಂತ್ ಜೀತ್ ಸಿಂಗ್ ನರೂಕಾ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಕೀಟ್ ಮಿಕ್ಸೆಡ್ ಟೀಮ್ ಇವೆಂಟ್ ನಲ್ಲಿ ಕಂಚಿನ ಪದಕ ಸುತ್ತಿಗೆ ಪ್ರವೇಶಿಸಿದ್ದರೂ ಸ್ವಲ್ಪದರಲ್ಲೇ ಪದಕ ಗೆಲ್ಲುವುದರಿಂದ ವಂಚಿತರಾದರು.
ಸೋಮವಾರ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಭಾರತದ ಮಹೇಶ್ವರಿ ಹಾಗೂ ಅನಂತ್ ಜೀತ್ ಅವರು ಚೀನಾದ ಜಿಯಾಂಗ್ ಯಿಟಿಂಗ್ ಹಾಗೂ ಲಿಯು ಜಿಯಾನ್ಲಿನ್ ವಿರುದ್ಧ 43-44 ಅಂತರದಿಂದ ಸೋತಿದ್ದಾರೆ. ಈ ಮೂಲಕ ಕೂದಲೆಳೆ ಅಂತರದಿಂದ ಕಂಚಿನ ಪದಕದಿಂದ ವಂಚಿತರಾಗಿ 4ನೇ ಸ್ಥಾನ ಪಡೆದಿದ್ದಾರೆ.
ಭಾರತೀಯ ತಂಡವು 48ರಲ್ಲಿ 43 ಅಂಕ ಗಳಿಸಿದರೆ, ಚೀನಾ ತಂಡವು 48ರಲ್ಲಿ 44 ಅಂಕ ಗಳಿಸಿ 3ನೇ ಸ್ಥಾನ ಪಡೆಯಿತು.
ಇದಕ್ಕೂ ಮೊದಲು ಅರ್ಹತಾ ಸುತ್ತಿನಲ್ಲಿ ಒಟ್ಟು 146 ಅಂಕ ಕಲೆ ಹಾಕಿದ್ದ ಮಹೇಶ್ವರಿ ಹಾಗೂ ಅನಂತ್ ಜೀತ್ ಕಂಚಿನ ಪದಕದ ಸುತ್ತಿಗೆ ತೇರ್ಗಡೆಯಾಗಿದ್ದರು.
ಆಸ್ಟ್ರೇಲಿಯ, ಕೊರಿಯಾ, ಫ್ರಾನ್ಸ್ ಹಾಗೂ ಎರಡು ಇಟಲಿ ತಂಡಗಳು ಒಳಗೊಂಡಿದ್ದ ಮೊದಲ ಹಂತದ ಅರ್ಹತಾ ಸುತ್ತಿನಲ್ಲಿ ಭಾರತವು ಒಟ್ಟು 49 ಅಂಕ ಗಳಿಸಿ 2ನೇ ಸ್ಥಾನ ಪಡೆದಿತ್ತು. ಅನಂತ್ಜೀತ್ ಮೊದಲ ಸುತ್ತಿನಲ್ಲಿ 25ಕ್ಕೆ 25 ಅಂಕ ಗಳಿಸಿದರೆ, ಮಹೇಶ್ವರಿ 25ರಲ್ಲಿ 24 ಅಂಕ ಗಳಿಸಿದರು. ಈ ಮೂಲಕ ಭಾರತ ಮೊದಲ ಸುತ್ತಿನಲ್ಲಿ ಒಟ್ಟು 49 ಅಂಕ ಗಳಿಸಿತು.
ಎರಡನೇ ಸುತ್ತಿನಲ್ಲಿ ಮಹೇಶ್ವರಿ ಚೌಹಾಣ್ ಭರ್ತಿ 25 ಅಂಕ ಗಳಿಸಿದರೆ, ಅನಂತ್ಜೀತ್ 2ನೇ ಹಾಗೂ 5ನೇ ಸಿರೀಸ್ ನಲ್ಲಿ ಎರಡು ಅಂಕ ಕೊರತೆ ಎದುರಿಸಿದರು. ಹೀಗಾಗಿ ಅವರು ಒಟ್ಟು 23 ಅಂಕ ಗಳಿಸಿದರು. 2ನೇ ಸುತ್ತಿನಲ್ಲಿ ಭಾರತದ ಜೋಡಿ ಒಟ್ಟು 48 ಅಂಕ ಗಳಿಸಿತು.
ಮೂರನೇ ಸುತ್ತಿನಲ್ಲಿ ಭಾರತವು ಒಟ್ಟು 49 ಅಂಕ ಗಳಿಸಿತು. ಮಹೇಶ್ವರಿ ಮತ್ತೊಮ್ಮೆ 25 ಅಂಕ ಗಳಿಸಿದರೆ, ಅನಂತ್ಜೀತ್ 24 ಅಂಕ ಸೇರಿಸಿದರು.







