ಆರ್ಸಿಬಿ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಗೆ 25 ರನ್ ಗಳ ಜಯ
ಪಂದ್ಯಕ್ಕೆ ರೋಚಕ ತಿರುವು ಕೊಟ್ಟ ದಿನೇಶ್ ಕಾರ್ತಿಕ್ ಆಟ

Photo : x/ @SunRisers
ಬೆಂಗಳೂರು : ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಶತಕ(102 ರನ್, 41 ಎಸೆತ, 9 ಬೌಂಡರಿ, 8 ಸಿಕ್ಸರ್), ಹೆನ್ರಿಕ್ ಕ್ಲಾಸೆನ್(67 ರನ್, 31 ಎಸೆತ)ಅರ್ಧಶತಕ ಹಾಗೂ ನಾಯಕ ಪ್ಯಾಟ್ ಕಮಿನ್ಸ್ (3-43) ನೇತೃತ್ವದ ಬೌಲರ್ಗಳ ಉತ್ತಮ ಬೌಲಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಮವಾರ ನಡೆದ ಐಪಿಎಲ್ನ 30ನೇ ಪಂದ್ಯದಲ್ಲಿ 25 ರನ್ನಿಂದ ಗೆಲುವು ದಾಖಲಿಸಿದೆ.
ಗೆಲ್ಲಲು 288 ರನ್ ಕಠಿಣ ಗುರಿ ಪಡೆದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 262 ರನ್ ಗಳಿಸಿ ಸೋಲೊಪ್ಪಿಕೊಂಡಿತು. ವಿಕೆಟ್ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್(83 ರನ್, 35 ಎಸೆತ, 5 ಬೌಂಡರಿ, 7 ಸಿಕ್ಸರ್)ಗೆಲುವಿಗಾಗಿ ಹೋರಾಟ ನೀಡಿದರು. ಇನಿಂಗ್ಸ್ ಆರಂಭಿಸಿದ ಎಫ್ಡು ಪ್ಲೆಸಿಸ್(62 ರನ್) ಹಾಗೂ ವಿರಾಟ್ ಕೊಹ್ಲಿ(42 ರನ್)ಮೊದಲ ವಿಕೆಟ್ಗೆ 80 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಈ ಇಬ್ಬರು ಬೇರ್ಪಟ್ಟ ನಂತರ ಆರ್ಸಿಬಿ ದಿಢೀರ್ ಕುಸಿತ ಕಂಡಿತು. 42 ರನ್ ಸೇರಿಸುವಷ್ಟರಲ್ಲಿ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ಆಗ ಜೊತೆಯಾದ ದಿನೇಶ್ ಕಾರ್ತಿಕ್ ಹಾಗೂ ಮಹಿಪಾಲ್ ಲಾಮ್ರಿರ್(19 ರನ್) 6ನೇ ವಿಕೆಟ್ಗೆ 59 ರನ್ ಸೇರಿಸಿ ತಂಡವನ್ನು ಆಧರಿಸಿದರು. ಲಾಮ್ರಿರ್ ಔಟಾದ ನಂತರ ಅನುಜ್ ರಾವತ್ ಜೊತೆ ಸೇರಿದ ಕಾರ್ತಿಕ್ 7ನೇ ವಿಕೆಟ್ಗೆ 63 ರನ್ ಜೊತೆಯಾಟ ನಡೆಸಿ ತಂಡದ ಸೋಲಿನ ಅಂತರ ತಗ್ಗಿಸಲು ಯತ್ನಿಸಿದರು.
ಸನ್ರೈಸರ್ಸ್ 287/3: ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಸನ್ರೈಸರ್ಸ್ ತಂಡ 3 ವಿಕೆಟ್ಗಳ ನಷ್ಟಕ್ಕೆ 287 ರನ್ ಗಳಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿತು. ಮಾತ್ರವಲ್ಲ ತನ್ನದೇ ಗರಿಷ್ಠ ಸ್ಕೋರ್(277 ರನ್)ದಾಖಲೆಯನ್ನು ಉತ್ತಮಪಡಿಸಿಕೊಂಡಿತು. ಟ್ರಾವಿಸ್ ಹೆಡ್ ಐಪಿಎಲ್ ಇತಿಹಾಸದಲ್ಲಿ 4ನೇ ವೇಗದ ಶತಕ ದಾಖಲಿಸಿದರು. ಟೂರ್ನಿಯ ಇತಿಹಾಸದಲ್ಲಿ ವೇಗದ ಶತಕ ಗಳಿಸಿದ ಹೈದರಾಬಾದ್ನ ಮೊದಲ ಬ್ಯಾಟರ್ ಎನಿಸಿಕೊಂಡರು. 2013ರಲ್ಲಿ ಬೆಂಗಳೂರಿನಲ್ಲಿ ಪಂಜಾಬ್ ವಿರುದ್ಧ ಆರ್ಸಿಬಿಯ ಕ್ರಿಸ್ ಗೇಲ್ ವೇಗದ ಶತಕ(30 ಎಸೆತ)ಗಳಿಸಿದ್ದರು. ಆ ನಂತರ ಯೂಸುಫ್ ಪಠಾಣ್(ರಾಜಸ್ಥಾನ ರಾಯಲ್ಸ್) 37 ಎಸೆತಗಳಲ್ಲಿ, ಡೇವಿಡ್ ಮಿಲ್ಲರ್(ಪಂಜಾಬ್)38 ಎಸೆತಗಳಲ್ಲಿ ಶತಕ ಪೂರೈಸಿದ್ದರು.
ಕ್ಲಾಸೆನ್ ಬಿರುಸಿನ ಅರ್ಧಶತಕ(67 ರನ್, 31 ಎಸೆತ, 2 ಬೌಂಡರಿ, 7 ಸಿಕ್ಸರ್)ಗಳಿಸಿ ಟಿ-20ಯ ಎಲ್ಲ ಮಾದರಿಯಲ್ಲಿ ಸನ್ರೈಸರ್ಸ್ ತಂಡ ಎರಡನೇ ಗರಿಷ್ಠ ಸ್ಕೋರ್ ಗಳಿಸಲು ಮುಖ್ಯ ಪಾತ್ರವಹಿಸಿದರು.
ಸನ್ರೈಸರ್ಸ್ ಐಪಿಎಲ್ ಇನಿಂಗ್ಸ್ನಲ್ಲಿ ಗರಿಷ್ಶ ಸಿಕ್ಸರ್ಗಳನ್ನು(22)ಸಿಡಿಸಿದ ಸಾಧನೆಯನ್ನು ಮಾಡಿತು. 2013ರಲ್ಲಿ ಪುಣೆ ಎದುರು 21 ಸಿಕ್ಸರ್ ಸಿಡಿಸಿದ್ದ ಆರ್ಸಿಬಿಯ ದಾಖಲೆಯನ್ನು ಮುರಿಯಿತು. ಆರ್ಸಿಬಿಯ ನಾಲ್ವರು ಬೌಲರ್ಗಳು 50ಕ್ಕೂ ಅಧಿಕ ರನ್ ನೀಡಿದರು. 68 ರನ್ಗೆ 1 ವಿಕೆಟ್ ಪಡೆದ ರೀಸ್ ಟೋಪ್ಲೆ ಐಪಿಎಲ್ನಲ್ಲಿ 3ನೇ ದುಬಾರಿ ಬೌಲರ್ ಎನಿಸಿಕೊಂಡರು. ಹೈದರಾಬಾದ್ ತಂಡ ಪ್ರಸಕ್ತ ಐಪಿಎಲ್ನಲ್ಲಿ ಹೈದರಾಬಾದ್ನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ 27ನೇ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತ್ತು. ಪ್ರಸಕ್ತ ಐಪಿಎಲ್ನಲ್ಲಿ ಮೂರು ಬಾರಿ 250ಕ್ಕೂ ಅಧಿಕ ಸ್ಕೋರ್ ದಾಖಲಾಗಿದ್ದು ವಿಶೇಷ. ಸನ್ರೈಸರ್ಸ್ ತಂಡಕ್ಕೆ ಆಸರೆಯಾದ ಆಸ್ಟ್ರೇಲಿಯದ ಆಟಗಾರ ಹೆಡ್ 39 ಎಸೆತಗಳಲ್ಲಿ ಶತಕ ಗಳಿಸಿದ್ದಲ್ಲದೆ, ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(34 ರನ್) ಅವರ ಜೊತೆ 108 ರನ್ ಜೊತೆಯಾಟ ನಡೆಸಿ ಮಾಜಿ ಐಪಿಎಲ್ ಚಾಂಪಿಯನ್ ದೊಡ್ಡ ಮೊತ್ತ ಗಳಿಸಲು ನೆರವಾದರು. ದಕ್ಷಿಣ ಆಫ್ರಿಕಾದ ವಿಕೆಟ್ಕೀಪರ್-ಬ್ಯಾಟರ್ ಕ್ಲಾಸೆನ್ 31 ಎಸೆತಗಳಲ್ಲಿ 67 ರನ್ ಗಳಿಸಿದರು. ಅಬ್ದುಲ್ ಸಮದ್(ಔಟಾಗದೆ 37, 10 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಮರ್ಕ್ರಮ್(ಔಟಾಗದೆ 32, 17 ಎಸೆತ, 2 ಬೌಂಡರಿ, 2 ಸಿಕ್ಸರ್)ಸನ್ರೈಸರ್ಸ್ ಇನಿಂಗ್ಸ್ಗೆ ಅಂತಿಮ ಸ್ಪರ್ಶ ನೀಡಿದರು.
ಆರ್ಸಿಬಿ ಪರ ಲಾಕಿ ಫರ್ಗುಸನ್(2-52) ಯಶಸ್ವಿ ಬೌಲರ್ ಎನಿಸಿಕೊಂಡರು.
ಸೋತರೂ ಇತಿಹಾಸ ಸೃಷ್ಟಿಸಿದ ಆರ್ ಸಿ ಬಿ!
ಪಂದ್ಯದಲ್ಲಿ ಆರ್ ಸಿ ಬಿ ಸೋತರೂ ಟಿ20 ಪಂದ್ಯವೊಂದರಲ್ಲಿ ಗರಿಷ್ಠ ರನ್ ಚೇಸ್ ಮಾಡಿದ ಹೆಗ್ಗಳಿಕೆಗೆ ಆರ್ಸಿಬಿ ಪಾತ್ರವಾಗಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡೂ ತಂಡಗಳು ಸೇರಿ 549 ರನ್ ಕಲೆ ಹಾಕಿರುವ ಇತಿಹಾಸವೂ ಈ ಪಂದ್ಯದಲ್ಲಿ ಸೃಷ್ಟಿಯಾಗಿದೆ.
ಸಂಕ್ಷಿಪ್ತ ಸ್ಕೋರ್
ಸನ್ರೈಸರ್ಸ್ ಹೈದರಾಬಾದ್: 20 ಓವರ್ಗಳಲ್ಲಿ 287/3
(ಟ್ರಾವಿಸ್ ಹೆಡ್ 102, ಹೆನ್ರಿಕ್ ಕ್ಲಾಸೆನ್ 67, ಅಬ್ದುಲ್ ಸಮದ್ ಔಟಾಗದೆ 37, ಅಭಿಷೇಕ್ ಶರ್ಮಾ 34, ಫರ್ಗ್ಯುಸನ್ 2-52)
ಆರ್ಸಿಬಿ: 20 ಓವರ್ಗಳಲ್ಲಿ 262/7
(ದಿನೇಶ್ ಕಾರ್ತಿಕ್ 83, ಎಫ್ಡು ಪ್ಲೆಸಿಸ್ 62, ವಿರಾಟ್ ಕೊಹ್ಲಿ 42, 3-43, ಮಯಾಂಕ್ ಮರ್ಕಂಡೆ 2-46)







