ಟೆಸ್ಟ್ ಮೇಲೆ ಶ್ರೀಲಂಕಾ ನಿಯಂತ್ರಣ | ಆತಿಥೇಯರ 2ನೇ ಇನಿಂಗ್ಸ್ ನಲ್ಲಿ ಕರುಣರತ್ನೆ ಅರ್ಧ ಶತಕ

ದಿಮುತ್ ಕರುಣರತ್ನೆ | Photo: NDTV
ಸಿಲ್ಹೆಟ್ : ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಶ್ರೀಲಂಕಾವು ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ ದಿಮುತ್ ಕರುಣರತ್ನೆಯ ಅರ್ಧಶತಕದ ನೆರವಿನಿಂದ 5 ವಿಕೆಟ್ ಗಳ ನಷ್ಟಕ್ಕೆ 119 ರನ್ ಗಳನ್ನು ಗಳಿಸಿದೆ. ಇದರೊಂದಿಗೆ ಅದು ಒಟ್ಟಾರೆ 211 ರನ್ ಗಳ ಮುನ್ನಡೆಯನ್ನು ಗಳಿಸಿದೆ.
ಇದಕ್ಕೂ ಮೊದಲು, ಆತಿಥೇಯ ಬಾಂಗ್ಲಾದೇಶವು ತನ್ನ ಮೊದಲ ಇನಿಂಗ್ಸನ್ನು 188 ರನ್ ಗಳಿಗೆ ಮುಕ್ತಾಯಗೊಳಿಸಿತು ಹಾಗೂ 92 ರನ್ ಗಳ ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸಿತು.
ದಿನದ ಅಂತಿಮ ಅವಧಿಯ ಆಟದಲ್ಲಿ ಕರುಣರತ್ನೆ 101 ರನ್ ಗಳನ್ನು ಎದುರಿಸಿ 52 ರನ್ ಗಳನ್ನು ಗಳಿಸಿದರು. ಮೊದಲ ಇನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ನಾಯಕ ಧನಂಜಯ ಡಿ ಸಿಲ್ವ 23ರಲ್ಲಿ ಮತ್ತು ವಿಶ್ವ ಫೆರ್ನಾಂಡೊ ಎರಡು ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಸ್ಪಿನ್ನರ್ಗಳಾದ ತೈಜುಲ್ ಇಸ್ಲಾಮ್ ಮತ್ತು ಮೆಹಿದಿ ಹಸನ್ ಮಿರಾಝ್ ಕ್ರಮವಾಗಿ ಆ್ಯಂಜೆಲೊ ಮ್ಯಾಥ್ಯೂಸ್ (22) ಮತ್ತು ದಿನೇಶ್ ಚಂಡಿಮಾಲ್ (0)ರ ವಿಕೆಟ್ ಗಳನ್ನು ಉರುಳಿಸಿ ಆತಿಥೇಯ ತಂಡಕ್ಕೆ ಕೊಂಚ ಭರವಸೆಯನ್ನು ತುಂಬಿದರು.
ಒಂದು ಹಂತದಲ್ಲಿ ಆತಿಥೇಯ ತಂಡವು 64 ರನ್ ಗಳನ್ನು ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಬಂದ ಕರುಣರತ್ನೆ ವ್ಯವಧಾನದ ಆಟವಾಡಿ ಇನಿಂಗ್ಸನ್ನು ನಿಧಾನವಾಗಿ ಬೆಳೆಸಿದರು.
ಇದಕ್ಕೂ ಮೊದಲು, ವಿಶ್ವ ಫೆರ್ನಾಂಡೊ, ಲಹಿರು ಕುಮಾರ ಮತ್ತು ಕಸುನ್ ರಜಿತ ಬಾಂಗ್ಲಾದೇಶದ ಮೊದಲ ಇನಿಂಗ್ಸನ್ನು 188ಕ್ಕೆ ಸೀಮಿತಗೊಳಿಸಿದರು. ವಿಶ್ವ ನಾಲ್ಕು ವಿಕೆಟ್ ಗಳನ್ನು ಪಡೆದರೆ, ಲಹಿರು ಕುಮಾರ ಮತ್ತು ರಜಿತ ತಲಾ ಮೂರು ವಿಕೆಟ್ ಗಳನ್ನು ಉರುಳಿಸಿದರು.
ಬಾಂಗ್ಲಾದೇಶವು ತನ್ನ ಮೊದಲ ಇನಿಂಗ್ಸನ್ನು 3 ವಿಕೆಟ್ ಗಳ ನಷ್ಟಕ್ಕೆ 32 ರನ್ ಇದ್ದಲ್ಲಿಂದ ಆರಂಭಿಸಿತು. ನೈಟ್ವಾಚ್ಮನ್ ತೈಜುಲ್ ಇಸ್ಲಾಮ್ ಜೀವನಶ್ರೇಷ್ಠ 47 ರನ್ ಗಳನ್ನು ಗಳಿಸಿದರು. ಅದು ತಂಡದ ಗರಿಷ್ಠ ವೈಯಕ್ತಿಕ ಸ್ಕೋರ್ ಕೂಡ ಆಯಿತು.
ಕುಮಾರ ಇನಿಂಗ್ಸ್ ನ ತನ್ನ ಮೊದಲ ಎಸೆತದಲ್ಲೇ ಹಿಂದಿನ ದಿನ ಕ್ರೀಸ್ ನಲ್ಲಿ ಉಳಿದಿದ್ದ ಮಹ್ಮುದುಲ್ ಹಸನ್ (12)ರ ವಿಕೆಟ್ ಪಡೆದರು. ಶಹಾದತ್ ಹುಸೈನ್(18) ಕೆಲವು ಆಕ್ರಮಣಕಾರಿ ಹೊಡೆತಗಳನ್ನು ಆಡಿದರೂ ಕುಮಾರ ಎಸೆತದಲ್ಲಿ ಔಟಾದರು. ತೈಜುಲ್ ಮತ್ತು ಲಿಟನ್ ದಾಸ್ (25) ಆರನೇ ವಿಕೆಟ್ಗೆ 41 ರನ್ ಗಳನ್ನು ಸೇರಿಸಿದರು. ಲಿಟನ್ ದಾಸ್ ನಾಲ್ಕು ಬೌಂಡರಿಗಳನ್ನು ಸಿಡಿಸಿದರು.
ಮೊದಲ ದಿನ, ಶ್ರೀಲಂಕಾವು ತನ್ನ ಮೊದಲ ಇನಿಂಗ್ಸ್ ನಲ್ಲಿ ಡಿ ಸಿಲ್ವ ಮತ್ತು ಕಮಿಂಡು ಮೆಂಡಿಸ್ರ ಶತಕಗಳ ನೆರವಿನಿಂದ 280 ರನ್ ಗಳನ್ನು ಕಲೆ ಹಾಕಿದೆ. ಅವರಿಬ್ಬರೂ ತಲಾ 102 ರನ್ ಗಳನ್ನು ಗಳಿಸಿದ್ದಾರೆ.
ಶ್ರೀಲಂಕಾವು ಬಾಂಗ್ಲಾದೇಶದಲ್ಲಿ ಈವರೆಗೆ ಯಾವುದೇ ಟೆಸ್ಟ್ ಸರಣಿಯನ್ನು ಕಳೆದುಕೊಂಡಿಲ್ಲ.







