ಶೂಟಿಂಗ್ ಕೋಚ್ ಸಮರೇಶ್ ಜಂಗ್ ಮನೆ ಧ್ವಂಸ ಕಾರ್ಯಾಚರಣೆಗೆ ತಡೆ | ನಾಳೆ ದಿಲ್ಲಿ ಹೈಕೋರ್ಟ್ನಲ್ಲಿ ತುರ್ತು ವಿಚಾರಣೆ

ಸಮರೇಶ್ ಜಂಗ್ | NDTV
ಹೊಸದಿಲ್ಲಿ : ದಿಲ್ಲಿಯ ಖೈಬರ್ ಪಾಸ್ ಪ್ರದೇಶದಲ್ಲಿರುವ ಮನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ತಡೆಹಿಡಿಯಲು ಭೂಮಿ ಮತ್ತು ಅಭಿವೃದ್ಧಿ ಕಚೇರಿ (ಎಲ್&ಡಿಒ) ನಿರ್ಧರಿಸಿದೆ. ಈ ಬಡಾವಣೆಯಲ್ಲಿ ಒಲಿಂಪಿಕ್ ಪದಕ ವಿಜೇತ ಮನು ಭಾಕರ್ರ ಶೂಟಿಂಗ್ ಕೋಚ್ ಹಾಗೂ ಒಲಿಂಪಿಯನ್ ಸಮರೇಶ್ ಜಂಗ್ ಸೇರಿದಂತೆ 200ಕ್ಕೂ ಅಧಿಕ ವ್ಯಕ್ತಿಗಳ ಮನೆಗಳಿವೆ.
ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಮರೇಶ್ ಜಂಗ್ ದಿಲ್ಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ಸೋಮವಾರ ನಡೆಯಲಿದೆ.
ರಾಷ್ಟ್ರೀಯ ಪಿಸ್ತೂಲ್ ಕೋಚ್ ಆಗಿರುವ ಜಂಗ್ ಪ್ಯಾರಿಸ್ ಒಲಿಂಪಿಕ್ಸ್ನಿಂದ ಮರಳಿದ ಕೂಡಲೇ ಅವರಿಗೆ ನೋಟಿಸ್ ನೀಡಲಾಗಿತ್ತು. ಸುಮಾರು 75 ವರ್ಷಗಳಿಂದ ಅವರ ಕುಟುಂಬ ವಾಸಿಸಿರುವ ಮನೆಯನ್ನು 48 ಗಂಟೆಗಳಲ್ಲಿ ಕೆಡವುದಾಗಿ ನೋಟಿಸ್ನಲ್ಲಿ ತಿಳಿಸಲಾಗಿತ್ತು. ಅವರ ಮತ್ತು ಇತರರ ಮನೆಗಳಿರುವ ಖೈಬರ್ ಪಾಸ್ ಪ್ರದೇಶವು ರಕ್ಷಣಾ ಇಲಾಖೆಗೆ ಸೇರಿದ್ದು, ಅಲ್ಲಿ ನಿರ್ಮಿಸಲಾಗಿರುವ ಮನೆಗಳು ಅಕ್ರಮ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
2006 ಮತ್ತು 2010ರ ಕಾಮನ್ವೆಲ್ತ್ ಗೇಮ್ಸ್ಗಳಲ್ಲಿ ಮಾಡಿರುವ ಸಾಧನೆಗಳಿಗಾಗಿ ‘ಗೋಲ್ಡ್ಫಿಂಗರ್’ ಎಂಬ ಹೆಸರಿನಿಂದ ಪ್ರಸಿದ್ಧರಾಗಿರುವ ಜಂಗ್, ಮನೆ ತೆರವುಗೊಳಿಸಲು ಕನಿಷ್ಠ ಎರಡು ತಿಂಗಳುಗಳ ಸಮಯಾವಕಾಶ ನೀಡುವಂತೆ ಕೋರಿದ್ದಾರೆ.
‘‘ಈ ಸ್ಥಳದಲ್ಲಿ ನಾವು ಕಳೆದ 75 ವರ್ಷಗಳಿಂದ ವಾಸಿಸುತ್ತಿದ್ದೇವೆ. 1978ರಲ್ಲಿ, ಈ ಜಮೀನು ಮತ್ತು ಕಟ್ಟಡವನ್ನು ಸಿಂಗ್ ಎಂಬವರಿಗೆ ಲೀಸ್ನಲ್ಲಿ ಕೊಡಲಾಗಿತ್ತು. ಅಂದಿನಿಂದ ನಾವು ಅವರಿಗೆ ಬಾಡಿಗೆ ಕೊಡುತ್ತಿದ್ದೇವೆ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಜಂಗ್ ಹೇಳಿದರು.
ಜಂಗ್ ಪ್ಯಾರಿಸ್ನಿಂದ ಆಗಮಿಸಿದ ಗಂಟೆಗಳ ಬಳಿಕ ಮನೆ ತೆರವು ನೋಟಿಸನ್ನು ಅವರಿಗೆ ನೀಡಲಾಗಿದೆ. ‘‘ಪ್ಯಾರಿಸ್ನಿಂದ ಹೊರಟು ಮನೆ ತಲುಪಿದ ಒಂದು ಗಂಟೆ ಬಳಿಕ ನನಗೆ ನೋಟಿಸ್ ತಲುಪಿತು’’ ಎಂದು ಅವರು ಹೇಳಿದರು.
ಕಾನೂನು ಪಾಲಿಸುವುದಾಗಿ ಹೇಳಿದ ಅವರು, ಪರ್ಯಾಯ ವ್ಯವಸ್ಥೆ ಮಾಡಲು ಸಾಕಷ್ಟು ಸಮಯಾವಕಾಶ ನೀಡಬೇಕು ಎಂದು ಹೇಳಿದರು.
ಜುಲೈ 9ರಂದು ದಿಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ಬಳಿಕ, ದಿಲ್ಲಿ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಖೈಬರ್ ಪಾಸ್ನಲ್ಲಿ ಮನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕಳೆದ ತಿಂಗಳು ಆರಂಭಗೊಂಡಿದೆ. ಜುಲೈ ಒಂದರಂದು ಅಲ್ಲಿನ ನಿವಾಸಿಗಳಿಗೆ ಮೊದಲ ನೋಟಿಸ್ ನೀಡಿ, ಜುಲೈ 4ರೊಳಗೆ ಮನೆ ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಧ್ವಂಸ ಕಾರ್ಯಾಚರಣೆಯನ್ನು ಮುಂದುವರಿಸಲು ದಿಲ್ಲಿ ಹೈಕೋರ್ಟ್ ಜುಲೈ 3ರಂದು ಅನುಮತಿ ನೀಡಿತ್ತು.







