ಸಂಕಷ್ಟ ಅನುಭವಿಸುತ್ತಿದ್ದೇನೆ, ನೆರವು ಬೇಕು : ಇಂಗ್ಲೆಂಡ್ ಮಾಜಿ ಆಲ್ ರೌಂಡರ್ ಫ್ಲಿಂಟಾಫ್ ಮನವಿ

ಆ್ಯಂಡ್ರೂ ಫ್ಲಿಂಟಾಫ್ | PC : X
ಲಂಡನ್ : ರಸ್ತೆ ಅಪಘಾತಕ್ಕೆ ಒಳಗಾದ ಬಳಿಕ ಚೇತರಿಸಿಕೊಳ್ಳುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಆ್ಯಂಡ್ರೂ ಫ್ಲಿಂಟಾಫ್, ನೆರವಿಗಾಗಿ ಮನವಿ ಮಾಡಿದ್ದಾರೆ.
ಬಿಬಿಸಿಯ ‘ಟಾಪ್ ಗೇರ್’ ಕಾರ್ಯಕ್ರಮಕ್ಕಾಗಿ ಚಿತ್ರೀಕರಣ ನಡೆಯುತ್ತಿದ್ದಾಗ 2022ರಲ್ಲಿ ಅಪಘಾತ ನಡೆದಿತ್ತು. ಅಪಘಾತದಲ್ಲಿ ಫ್ಲಿಂಟಾಫ್ರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಘಟನೆಯ ಬಳಿಕ, ಬಿಬಿಸಿಯು ಆ ಕಾರ್ಯಕ್ರಮದ ಚಿತ್ರೀಕರಣವನ್ನು ಸ್ಥಗಿತಗೊಳಿಸಿತ್ತು. ಹಾಗೂ, ಪರಿಹಾರವಾಗಿ ಫ್ಲಿಂಟಾಫ್ 9 ಮಿಲಿಯ ಪೌಂಡ್ (ಸುಮಾರು 97.50 ಕೋಟಿ ರೂಪಾಯಿ) ಪಡೆದಿದ್ದರು.
‘ಫ್ರೆಡ್ಡೀ ಫ್ಲಿಂಟಾಫ್’ಸ್ ಫೀಲ್ಡ್ ಆಫ್ ಡ್ರೀಮ್ಸ್ ಆನ್ ಟೂರ್’ ಎಂಬ ಸರಣಿಯಲ್ಲಿ, ಈ ಘಟನೆಯ ಬಗ್ಗೆ ಮತ್ತು ಚೇತರಿಕೆಯ ಅನುಭವದ ಬಗ್ಗೆ ಫ್ಲಿಂಟಾಫ್ ವಿವರವಾಗಿ ಮಾತನಾಡಿದ್ದಾರೆ.
‘‘ಆ ಘಟನೆ ನಡೆದ ಬಳಿಕ, ನಾನು ಇಲ್ಲಿ ಇರಬಾರದಾಗಿತ್ತು. ಇಲ್ಲಿ ಕುಳಿತು ನನ್ನ ಬಗ್ಗೆಯೇ ಮರುಕಪಡುವುದು ನನಗೆ ಇಷ್ಟವಿಲ್ಲ. ನನಗೆ ಸಹಾನುಭೂತಿ ಬೇಡ. ಮುಂದಿನ ದಿನಗಳ ಕುರಿತ ಅನಿಶ್ಚಿತತೆಯಿಂದ ನಾನು ಬಳಲುತ್ತಿದ್ದೇನೆ. ನನ್ನನ್ನು ದುಃಸ್ವಪ್ನಗಳು ಕಾಡುತ್ತಿವೆ. ನಾನು ಹಿಂದಿನದನ್ನು ಜ್ಞಾಪಿಸಿಕೊಳ್ಳುತ್ತಿದ್ದೇನೆ. ಇದನ್ನು ನಿಭಾಯಿಸುವುದು ಕಷ್ಟವಾಗಿದೆ. ಆದರೆ, ನಾನು ಏನಾದರೂ ಮಾಡದಿದ್ದರೆ ಮುಂದೆ ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ನನಗೆ ಮನವರಿಕೆಯಾಗಿದೆ. ನಾನು ಈಗಾಗಲೇ ಸಂಕಷ್ಟಕ್ಕೆ ಒಳಗಾಗಿದ್ದೇನೆ. ನನಗೆ ನೆರವು ಬೇಕು. ನೆರವು ಕೇಳುವುದರಲ್ಲಿ ನಾನು ಯಾವತ್ತೂ ಹಿಂದೆ. ಎರಡು ನಿಮಿಷಗಳಿಗೊಮ್ಮೆ ಅಳುವುದನ್ನು ನಾನು ನಿಲ್ಲಿಸಬೇಕಾಗಿದೆ’’ ಎಂದು ಫ್ಲಿಂಟಾಫ್ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ, ಇಂಗ್ಲೆಂಡ್ ಕ್ರಿಕೆಟ್ ತಂಡದ ಭಾರತ ಟೆಸ್ಟ್ ಪ್ರವಾಸದ ಕೋಚಿಂಗ್ ಸಿಬ್ಬಂದಿಯಾಗಿ ಫ್ಲಿಂಟಾಫ್ ಕ್ರಿಕೆಟ್ಗೆ ಮರಳಿದ್ದಾರೆ. ಆದರೆ, ಉದ್ವಿಗ್ನತೆಯ ಕಾರಣದಿಂದಾಗಿ ಭಾರತಕ್ಕೆ ಪ್ರಯಾಣಿಸಲು ಅವರಿಗೆ ಸಾಧ್ಯವಾಗಿಲ್ಲ. ಅವರು ಪ್ರಸಕ್ತ, ‘ನಾರ್ದರ್ನ್ ಸೂಪರ್ಚಾರ್ಜರ್ಸ್’ನ ಪೂರ್ಣಾವಧಿ ಕೋಚ್ ಆಗಿದ್ದಾರೆ.
ಫ್ಲಿಂಟಾಫ್ ಇಂಗ್ಲೆಂಡ್ ಪರವಾಗಿ 79 ಟೆಸ್ಟ್ ಪಂದ್ಯಗಳನ್ನು ಆಡಿ 3,845 ರನ್ಗಳು ಮತ್ತು 226 ವಿಕೆಟ್ಗಳನ್ನು ಗಳಿಸಿದ್ದಾರೆ. ಅವರು 141 ಏಕದಿನ ಪಂದ್ಯಗಳಲ್ಲಿ 3,394 ರನ್ಗಳನ್ನು ಗಳಿಸಿದ್ದಾರೆ ಮತ್ತು 169 ವಿಕೆಟ್ಗಳನ್ನು ಉರುಳಿಸಿದ್ದಾರೆ.







