ಒಮಾನ್ ಕ್ರಿಕೆಟ್ ತಂಡದ ಕೋಚ್ ಆಗಿ ಸುಲಕ್ಷಣ್ ಕುಲಕರ್ಣಿ ನೇಮಕ

Photo Credit: THE HINDU
ಮುಂಬೈ, ಜು. 20: ಮುಂಬೈನ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಸುಲಕ್ಷಣ್ ಕುಲಕರ್ಣಿಯನ್ನು ಒಮಾನ್ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದ ಉಪ ಪ್ರಧಾನ ಕೋಚ್ ಆಗಿ ರವಿವಾರ ನೇಮಕ ಮಾಡಲಾಗಿದೆ.
‘‘ಒಮಾನ್ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದ ಉಪ ಪ್ರಧಾನ ಕೋಚ್ ಆಗಿ ಸುಲಕ್ಷಣ್ ಕುಲಕರ್ಣಿಯನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಜಾಗತಿಕ ಮಟ್ಟದಲ್ಲಿ ನಮ್ಮ ಯಾನವನ್ನು ಆರಂಭಿಸುವ ಸಿದ್ಧತೆಗಳನ್ನು ನಾವು ನಡೆಸುತ್ತಿರುವಾಗ, ದೇಶಿ ಮತ್ತು ಅಂತರ್ರಾಷ್ಟ್ರೀಯ ಕ್ರಿಕೆಟ್ ಅನುಭವವಿರುವ ಅನುಭವಿ ಕೋಚ್ ಕುಲಕರ್ಣಿ ನಮ್ಮ ಕೋಚಿಂಗ್ ವ್ಯವಸ್ಥೆಯನ್ನು ಬಲಪಡಿಸಲಿದ್ದಾರೆ’’ ಎಂಬ ಸಂದೇಶವನ್ನು ಒಮಾನ್ ಕ್ರಿಕೆಟ್ ‘ಎಕ್ಸ್’ನಲ್ಲಿ ಹಾಕಿದೆ.
ತಮಿಳುನಾಡು ತಂಡದ ಕೋಚ್ ಆಗಿ ಒಂದು ವರ್ಷ ಸೇವೆ ಸಲ್ಲಿಸಿದ ಬಳಿಕ, ಕಳೆದ ದೇಶಿ ಋತುವಿನಲ್ಲಿ ಕುಲಕರ್ಣಿ ಮಹಾರಾಷ್ಟ್ರ ತಂಡದ ಪ್ರಧಾನ ಕೋಚ್ ಆಗಿದ್ದರು.
ಮಾಜಿ ಮುಂಬೈ ವಿಕೆಟ್ ಕೀಪರ್-ಬ್ಯಾಟರ್ ಕುಲಕರ್ಣಿ 65 ಪ್ರಥಮ ದರ್ಜೆ ಪಂದ್ಯಗಳು ಮತ್ತು 13 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. 2012-13ರಲ್ಲಿ ಮುಂಬೈ ತಂಡದ ಪ್ರಧಾನ ಕೋಚ್ ಆಗಿ ತಂಡವನ್ನು ಅದರ 40ನೇ ರಣಜಿ ಟ್ರೋಫಿ ಪ್ರಶಸ್ತಿಯತ್ತ ಯಶಸ್ವಿಯಾಗಿ ಮುನ್ನಡೆಸಿದ್ದರು.





