ಭಾರತ ತಂಡ ಸೇರಲು ಸೂರ್ಯವಂಶಿ ಸಜ್ಜು? ಐಪಿಎಲ್ ಮುಖ್ಯಸ್ಥರ ಸುಳಿವು

PC: Vaibhav_Suryavanshi (PC: X)
ಹೊಸದಿಲ್ಲಿ: ಭಾರತದ ತಂಡದ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಅಧ್ಯಕ್ಷ ಅರುಣ್ ಧುಮಾಲ್, 14 ವರ್ಷದ ಉದಯೋನ್ಮುಖ ಕ್ರಿಕೆಟರ್ ವೈಭವ್ ಸೂರ್ಯವಂಶಿಯರವ ಪ್ರತಿಭೆಯನ್ನೂ ಕೊಂಡಾಡಿದ್ದಾರೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯವರ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಈ ದಿಗ್ಗಜರ ಪಾರಮ್ಯ ಅಂತ್ಯವಾಗಿಲ್ಲ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಅವರ ಅದ್ಭುತ ಬ್ಯಾಟಿಂಗ್ ಗುಣಗಾನ ಮಾಡಿದ್ದಾರೆ.
"ಭಾರತ ತಂಡದ ಬಲದ ಬಗ್ಗೆ ನಾವು ಧೀರ್ಘಕಾಲದಿಂದ ಚರ್ಚಿಸುತ್ತಿದ್ದೇವೆ. ಆದರೆ ಈ ತಂಡವನ್ನು ನೋಡಿ, 14 ವರ್ಷದ ಅದ್ಭುತ ಬಾಲಕ ವೈಭವ್ ಸೂರ್ಯವಂಶಿ ತಂಡದ ಭಾಗವಾಗಲು ಬಾಗಿಲು ಬಡಿಯುತ್ತಿದ್ದಾರೆ" ಎಂದು ಹೇಳಿದರು.
"ಕೊಹ್ಲಿ, ಶರ್ಮಾ ಅವರಂಥ ಹಿರಿಯ ಆಟಗಾರರು ಹೊರಹೋಗುತ್ತಾರೆ ಎಂದು ಜನ ಭಾವಿಸಿದ್ದರು. ಆದರೆ ಅವರು ಹೋಗುತ್ತಿಲ್ಲ. ಅವರು ಮುಂದುವರಿಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅವರ ಅದ್ಭುತ ಬ್ಯಾಟಿಂಗ್ ಈ ವಯಸ್ಸಿನಲ್ಲೂ ಗಮನ ಸೆಳೆದಿದೆ. ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ ಸಂದಿದೆ. ಇದು ಅವರ ಬದ್ಧತೆಯನ್ನು ಸೂಚಿಸುತ್ತದೆ. ಭಾರತ ತಂಡದ ಬಗ್ಗೆ ಮಾತನಾಡುವುದಾದರೆ, ಸರ್ವಶ್ರೇಷ್ಠ ಪ್ರದರ್ಶನ ನೀಡುವುದು ಅವರ ಬಯಕೆ. ಇದು ಕ್ರೀಡಾಸ್ಫೂರ್ತಿಯ ಪ್ರತಿಬಿಂಬ. ಇಬ್ಬರಿಗೂ ಶುಭಾಶಯಗಳು. ಅವರು ಅದ್ಭುತಗಳನ್ನು ಸಾಧಿಸಿದ್ದು, ಭಾರತೀಯ ಕ್ರಿಕೆಟ್ಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ" ಎಂದು ಎಎನ್ಐ ಜತೆ ಮಾತನಾಡಿದ ಧುಮಾಲ್ ವಿಶ್ಲೇಷಿಸಿದ್ದಾರೆ.







