ಭಾರತೀಯ ಫುಟ್ಬಾಲ್ ಸಂಸ್ಥೆಯ ನೆತ್ತಿಯ ಮೇಲೆ ಅಮಾನತಿನ ತೂಗುಗತ್ತಿ

ಪಣಜಿ: ಅಕ್ಟೋಬರ್ 30ರ ಒಳಗಾಗಿ ಫಿಫಾ ಸೂಚಿಸಿರುವ ಸಂವಿಧಾನವನ್ನು ಅಳವಡಿಸಿಕೊಳ್ಳದೇ ಇದ್ದಲ್ಲಿ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಅಮಾನತುಗೊಳ್ಳುವ ಸಾಧ್ಯತೆ ಇದೆ. ಜಾಗತಿಕ ಫುಟ್ಬಾಲ್ ನಿರ್ವಹಣಾ ಸಂಸ್ಥೆಯಾದ ಫಿಫಾ ಹಾಗೂ ಏಷ್ಯನ್ ಫುಟ್ಬಾಲ್ ಕಾನ್ಫಿಡರೇಶನ್ (ಎಎಫ್‌ಸಿ) ಈ ಸಂಬಂಧ ಎಐಎಫ್ಎಫ್ ಗೆ ನೋಟಿಸ್ ನೀಡಿವೆ.
ಫಿಫಾ ಮತ್ತು ಎಎಫ್‌ಸಿ ಜಂಟಿಯಾಗಿ ಎಐಎಫ್ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರಿಗೆ ಮಂಗಳವಾರ ಪತ್ರ ಬರೆದಿದ್ದು, ಪರಿಷ್ಕೃತ ಸಂವಿಧಾನವನ್ನು ಅಂತಿಮಪಡಿಸಲು ಮತ್ತು ಅನುಷ್ಠಾನಕ್ಕೆ ವಿಫಲವಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. ಪ್ರಕರಣ 2017ರಿಂದ ಭಾರತದ ಸುಪ್ರೀಂಕೋರ್ಟ್ ನಲ್ಲಿ ಇರುವುದರಿಂದ ಪರಿಷ್ಕೃತ ಸಂವಿಧಾನದ ವಿಚಾರ ಇನ್ನೂ ಪರಿಶೀಲನೆಯಲ್ಲಿದೆ. ಮತ್ತೆ ಮತ್ತೆ ಭರವಸೆಗಳನ್ನು ನೀಡಿಯೂ, ಸ್ಪಷ್ಟ ಮತ್ತು ಸಮಗ್ರ ಆಡಳಿತಾತ್ಮಕ ಚೌಕಟ್ಟನ್ನು ರೂಪಿಸಿಕೊಳ್ಳದಿರುವುದರಿಂದ ಭಾರತೀಯ ಫುಟ್ಬಾಲ್ ವ್ಯವಸ್ಥೆಯಲ್ಲಿ ಅಸಮರ್ಥನೀಯ ಶೂನ್ಯತ್ವ ಮತ್ತು ಕಾನೂನಾತ್ಮಕ ಅನಿಶ್ಚಿತತೆಗಳು ಕಾಣಿಸುತ್ತಿವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಫಿಫಾ ಮುಖ್ಯ ಸದಸ್ಯ ಸಂಘಟನಾ ಅಧಿಕಾರಿ ಎಲ್ಖಾನ್ ಮಮ್ಮದೋವ್ ಮತ್ತು ಎಎಫ್‌ಸಿ ಸದಸ್ಯ ಸಂಘಟನಾ ಉಪ ಪ್ರಧಾನ ಕಾರ್ಯದರ್ಶಿ ವಹೀದ್ ಕಾರ್ಡನಿ ಪತ್ರಕ್ಕೆ ಸಹಿ ಮಾಡಿದ್ದಾರೆ.
ಫಿಫಾ ಮತ್ತು ಎಎಫ್‌ಸಿ ಕಡ್ಡಾಯಪಡಿಸಿರುವ ನಿಬಂಧನೆಗಳಿಗೆ ಅನುಸಾರವಾದ ಪರಿಷ್ಕೃತ ಎಐಎಫ್ಎಫ್ ಸಂವಿಧಾನವನ್ನು ಅನುಮೋದಿಸುವ ಸಂಬಂಧ ಅಕ್ಟೋಬರ್ 30ರ ಒಳಗೆ ಸುಪ್ರೀಂಕೋರ್ಟ್ ನಿಂದ ನಿರ್ದಿಷ್ಟ ಆದೇಶವನ್ನು ಪಡೆಯುವಂತೆ ಗಡುವು ವಿಧಿಸಲಾಗಿದೆ.





