ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ | ಮಿಂಚಿದ ಕೌಶಿಕ್, ತಮಿಳುನಾಡು ವಿರುದ್ಧ ಕರ್ನಾಟಕ ಜಯಭೇರಿ

Vasuki Koushik | PC: The Hindu
ಇಂದೋರ್ : ಹೊಸ ಚೆಂಡಿನಲ್ಲಿ ಮೂರು ವಿಕೆಟ್ಗಳನ್ನು ಉರುಳಿಸಿದ ವಿ.ಕೌಶಿಕ್ ಸಹಾಯದಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ರವಿವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಕ್ರಿಕೆಟ್ ತಂಡವು ತಮಿಳುನಾಡು ತಂಡವನ್ನು 7 ವಿಕೆಟ್ಗಳ ಅಂತರದಿಂದ ಮಣಿಸಿದೆ.
ಎಮರಾಲ್ಡ್ ಹೈಟ್ಸ್ ಇಂಟರ್ನ್ಯಾಶನಲ್ ಸ್ಕೂಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೌಶಿಕ್ 4 ಓವರ್ಗಳಲ್ಲಿ 1 ಮೇಡನ್ ಸಹಿತ 10 ರನ್ ನೀಡಿ 3 ವಿಕೆಟ್ಗಳನ್ನು ಕಬಳಿಸಿದರು. ಈ ಮೂಲಕ ನೆರೆ ರಾಜ್ಯದ ತಂಡವನ್ನು ಕೇವಲ 90 ರನ್ಗೆ ನಿಯಂತ್ರಿಸುವಲ್ಲಿ ನೆರವಾದರು.
ಗೆಲ್ಲಲು ಸುಲಭ ಸವಾಲು ಬೆನ್ನಟ್ಟಿದ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡವು ಕೇವಲ 11.3 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 93 ರನ್ ಗಳಿಸಿತು. ಮನೀಶ್ ಪಾಂಡೆ 29 ಎಸೆತಗಳಲ್ಲಿ 42 ರನ್ ಗಳಿಸಿದರು. ಈ ಪ್ರಯತ್ನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಕರ್ನಾಟಕ ತಂಡ ಬಿ ಗುಂಪಿನಲ್ಲಿ 5 ಪಂದ್ಯಗಳಲ್ಲಿ 3ನೇ ಗೆಲುವು ದಾಖಲಿಸಿ 12 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದಿದೆ. ಸತತ ಮೂರನೇ ಸೋಲು ಕಂಡಿರುವ ತಮಿಳುನಾಡು ತಂಡದ ನಾಕೌಟ್ ಹಂತಕ್ಕೇರುವ ಅವಕಾಶ ಬಹುತೇಕ ಕ್ಷೀಣಿಸಿದೆ.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ತಮಿಳುನಾಡು ತಂಡವು ಕೇವಲ 7 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ಮೊದಲ ಓವರ್ನಲ್ಲೇ ಕೌಶಿಕ್ ಅವರು ಎನ್. ಜಗದೀಶನ್(0) ವಿಕೆಟನ್ನು ಪಡೆದರು. ಬಿ.ಇಂದ್ರಜೀತ್(5 ರನ್) ಅವರು ವಿದ್ಯಾಧರ ಪಾಟೀಲ್(2-20) ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಕೌಶಿಕ್ ಮೂರನೇ ಓವರ್ನಲ್ಲಿ ಇನ್ನೆರಡು ವಿಕೆಟ್ಗಳನ್ನು ಕಬಳಿಸಿದರು. ಎಂ.ಭೂಪತಿ ವೈಷ್ಣ ಕುಮಾರ್(1 ರನ್) ಹಾಗೂ ವಿಜಯ್ ಶಂಕರ್(0) ಬೇಗನೆ ವಿಕೆಟ್ ಕೈಚೆಲ್ಲಿದರು.
ಎಂ.ಶಾರುಕ್ ಖಾನ್(19 ರನ್) ಹಾಗೂ ಎಸ್.ಮುಹಮ್ಮದ್ ಅಲಿ(15 ರನ್) 5ನೇ ವಿಕೆಟ್ಗೆ 32 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ಆಧರಿಸಿದರು. ಶಾರುಖ್ ಖಾನ್ ಅವರು ಮನೋಜ್ ಭಂಡಾಗೆ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.







