ಟಿ20 ಕ್ರಿಕೆಟ್ | ಸತತ 4 ಮೇಡನ್ ಓವರ್ ಎಸೆದು ಇತಿಹಾಸ ನಿರ್ಮಿಸಿದ ಆಯುಷ್ ಶುಕ್ಲಾ

PC : X \ @NewsSports_35
ಹೊಸದಿಲ್ಲಿ : ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಸತತ ನಾಲ್ಕು ಮೇಡನ್ ಓವರ್ಗಳನ್ನು ಎಸೆದಿರುವ ಹಾಂಕಾಂಗ್ನ ಕ್ರಿಕೆಟಿಗ 21ರ ಹರೆಯದ ಆಯುಷ್ ಶುಕ್ಲಾ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 3ನೇ ಬೌಲರ್ ಎನಿಸಿಕೊಂಡಿದ್ದಾರೆ.
ಈ ಮೈಲಿಗಲ್ಲು ತಲುಪಿದ ಏಶ್ಯದ ಮೊದಲ ಬೌಲರ್ ಎಂಬ ಹಿರಿಮೆಗೆ ಶುಕ್ಲಾ ಪಾತ್ರರಾಗಿದ್ದಾರೆ.
ಮಂಗೋಲಿಯ ವಿರುದ್ಧ ಐಸಿಸಿ ಪುರುಷರ ಟಿ20 ವಿಶ್ವಕಪ್ ಏಶ್ಯ ಕ್ವಾಲಿಫೈಯರ್ನಲ್ಲಿ 4-4-0-1 ಬೌಲಿಂಗ್ ಮೂಲಕ ಶುಕ್ಲಾ ಮಿಂಚಿದರು.
ಹಾಂಕಾಂಗ್ ಪರ ಹೊಸ ಚೆಂಡಿನೊಂದಿಗೆ ಬೌಲಿಂಗ್ ದಾಳಿ ನಡೆಸಿದ ಶುಕ್ಲಾ ಸತತ 4 ಓವರ್ಗಳನ್ನು ಬೌಲಿಂಗ್ ಮಾಡಿದರು. ವಿಕೆಟ್ ಮೇಡನ್ನೊಂದಿಗೆ ದಾಳಿ ಆರಂಭಿಸಿದ ಶುಕ್ಲಾ ಅವರು ಆ ನಂತರ ಸತತ 18 ಡಾಟ್ ಬೌಲ್ಗಳನ್ನು ಎಸೆದರು. ಈ ಮೂಲಕ ಮಂಗೋಲಿಯದ ಬ್ಯಾಟರ್ಗಳ ಮೇಲೆ ಒತ್ತಡ ಹೇರಿದರು.
ಶುಕ್ಲಾಗಿಂತ ಮೊದಲು ಕೆನಡಾದ ಸಾದ್ ಬಿನ್ ಝಾಫರ್ ಹಾಗೂ ನ್ಯೂಝಿಲ್ಯಾಂಡ್ನ ಲಾಕಿ ಫರ್ಗ್ಯುಸನ್ ಟಿ20 ಪಂದ್ಯದಲ್ಲಿ ಸತತ 4 ಮೇಡನ್ ಓವರ್ಗಳನ್ನು ಬೌಲಿಂಗ್ ಮಾಡಲು ಶಕ್ತರಾಗಿದ್ದರು. ಝಾಫರ್ 2021ರಲ್ಲಿ ಪನಾಮ ತಂಡದ ವಿರುದ್ಧ ಈ ಸಾಧನೆ(4-4-0-2) ಮಾಡಿದರೆ, ಫರ್ಗ್ಯುಸನ್ ಈ ವರ್ಷದ ಟಿ20 ವಿಶ್ವಕಪ್ನಲ್ಲಿ ಪಪುವಾ ನ್ಯೂ ಗಿನಿ ತಂಡದ ವಿರುದ್ಧ ಎಸೆದ ಎಲ್ಲ 4 ಓವರ್ ಮೇಡನ್ ಆಗಿತ್ತು(4-4-0-3).
ಆಯುಷ್ ಶುಕ್ಲಾ ಅವರ ದಾಖಲೆಯ ಸ್ಪೆಲ್ ಗಮನಾರ್ಹ ಸಾಧನೆಯಾಗಿದ್ದು, ಇದು ಹಾಂಕಾಂಗ್ ಕ್ರಿಕೆಟಿಗೆ ಹೆಮ್ಮೆಯ ಕ್ಷಣವಾಗಿದೆ.







