ಟೇಬಲ್ ಟೆನಿಸ್ ಮಹಿಳೆಯರ ಸಿಂಗಲ್ಸ್: ಸ್ರೀಜಾ ಅಕುಲ ಪ್ರಿ ಕ್ವಾರ್ಟರ್ ಫೈನಲ್ ಗೆ

ಸ್ರೀಜಾ ಅಕುಲ | PC : NDTV
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ, ಟೇಬಲ್ ಟೆನಿಸ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸ್ರೀಜಾ ಅಕುಲ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಬುಧವಾರ ನಡೆದ 32 ಆಟಗಾರರ ಸುತ್ತಿನ ಪಂದ್ಯವೊಂದರಲ್ಲಿ ಅವರು ಸಿಂಗಾಪುರದ ಜಿಯಾನ್ ಝೆಂಗ್ ರನ್ನು 4-2 ಸೆಟ್ ಗಳಿಂದ ಸೋಲಿಸಿದರು. ಇದರೊಂದಿಗೆ ಭಾರತೀಯ ಟೇಬಲ್ ಟೆನಿಸ್ ತಂಡವು ಪ್ಯಾರಿಸ್ ನಲ್ಲಿ ಇತಿಹಾಸ ಸೃಷ್ಟಿಸಿದೆ.
ಸ್ರೀಜಾ ತನ್ನ 26ನೇ ಹುಟ್ಟುಹಬ್ಬದ ದಿನದಂದು ತನ್ನ ಎದುರಾಳಿಯನ್ನು 9-11, 12-10, 11-4, 11-5, 10-12, 12-10 ಗೇಮ್ ಗಳಿಂದ ಸೋಲಿಸಿದರು. ಇದು ಭಾರತೀಯ ಟೇಬಲ್ ಟೆನಿಸ್ ಇತಿಹಾಸದಲ್ಲಿ ಅಭೂತಪೂರ್ವ ಸಾಧನೆಯಾಗಿದೆ.
ಮಣಿಕಾ ಬಾತ್ರಾ ಈಗಾಗಲೇ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಸ್ರೀಜಾ ತನ್ನ ಆರಂಭಿಕ ಗೇಮನ್ನು ಸೋತರೂ ಬಳಿಕ ಪ್ರಬಲ ಪ್ರತಿ ಹೋರಾಟ ನೀಡಿದರು. ಅಂತಿಮವಾಗಿ ಅವರು ವಿಜಯಿಯಾಗಿ ಹೊರಹೊಮ್ಮಿದರು. ಪಂದ್ಯವು 51 ನಿಮಿಷಗಳ ಕಾಲ ಸಾಗಿತು.
ಮೊದಲ ಗೇಮನ್ನು ಸೋತರೂ, ಸ್ವಲ್ಪ ಅದೃಷ್ಟದ ಬಲದಿಂದ ಎರಡನೇ ಗೇಮನ್ನು ಗೆಲ್ಲುವಲ್ಲಿ ಅವರು ಯಶಸ್ವಿಯಾದರು. ಇದರಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ.
ಕಳೆದ ತಿಂಗಳು, ಸ್ರೀಜಾ 24ನೇ ವಿಶ್ವ ರ್ಯಾಂಕಿಂಗ್ ಗಳಿಸಿದ್ದರು. ಇದು ಅವರ ಕ್ರೀಡಾ ಬದುಕಿನ ಗರಿಷ್ಠ ರ್ಯಾಂಕಿಂಗ್ ಆಗಿದೆ. ಆ ಮೂಲಕ ಅವರು ಭಾರತದ ಅಗ್ರ ಮಹಿಳಾ ಸಿಂಗಲ್ಸ್ ಆಟಗಾರ್ತಿಯಾಗಿ ಮಣಿಕಾ ಬಾತ್ರಾರನ್ನು ಹಿಂದಿಕ್ಕಿದರು.
ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ 2022ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ, ಶರತ್ ಕಮಲ್ ಜೊತೆಗೆ ಮಿಶ್ರ ಡಬಲ್ಸ್ ನಲ್ಲಿ ಸ್ರೀಜಾ ಚಿನ್ನ ಗೆದ್ದಿದ್ದರು.







