ಟಾಟಾ ಸ್ಟೀಲ್ ಚೆಸ್: ಅರ್ಜುನ್ ಎರಿಗೈಸಿ ವಿರುದ್ಧ ಪ್ರಜ್ಞಾನಂದ ಗೆಲುವು

ಅರ್ಜುನ್ ಎರಿಗೈಸಿ , ಪ್ರಜ್ಞಾನಂದ | PC : PTI
ಹೊಸದಿಲ್ಲಿ: ಟಾಟಾ ಸ್ಟೀಲ್ ಚೆಸ್ ಟೂರ್ನಿ-2025 ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಬಿಳಿ ಕಾಯಿಗಳೊಂದಿಗೆ ಭಾರತದ ನಂಬರ್ ವನ್ ಆಟಗಾರ ಅರ್ಜುನ್ ಎರಿಗೈಸಿ ವಿರುದ್ಧ ಗೆಲುವು ಸಾಧಿಸಿ ಪ್ರಜ್ಞಾನಂದ ದಿನದ ಸ್ಟಾರ್ ಸಾಧಕ ಎನಿಸಿದ್ದಾರೆ.
ಎಂಟನೇ ನಡೆಯಲ್ಲಿ ಪ್ರಜ್ಞಾನಂದ ಅವರ ಕ್ವೀನ್ ಪಡೆದು ಬಿಗಿಹಿಡಿತ ಸಾಧಿಸಿದರು. ರಭಸದ ಆಟದ ಮೂಲಕ ಗಮನ ಸೆಳೆದ ಎರಿಗೈಸಿ 51ನೇ ನಡೆಯಲ್ಲಿ ಎಸಗಿದ ಪ್ರಮಾದ ಅವರ ಪಾಲಿಗೆ ಮುಳುವಾಯಿತು.
ನಿರ್ಣಾಯಕ 56ನೇ ನಡೆಯಲ್ಲಿ ಅರ್ಜುನ್ ಮತ್ತೆ ತಪ್ಪು ಎಸಗಿ, 60ನೇ ನಡೆಯಲ್ಲಿ ಎದುರಾಳಿಗೆ ಆಟ ಬಿಟ್ಟುಕೊಡಬೇಕಾಯಿತು. ಸತತ ಎರಡು ಗೆಲುವಿನೊಂದಿಗೆ ಪ್ರಜ್ಞಾನಂದ ಇದೀಗ ಮೂರು ಪಂದ್ಯಗಳಿಂದ 2.5 ಅಂಕ ಕಲೆ ಹಾಕಿದ್ದಾರೆ.
ನೆದರ್ಲೆಂಡ್ಸ್ ಆಯೋಜಿಸಿದ್ದ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಇತಿಹಾಸದಲ್ಲೇ ಗರಿಷ್ಠ ಅಂದರೆ ಐದು ಮಂದಿ ಆಟಗಾರರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಜ್ಞಾನಂದ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ ಮತ್ತೊಬ್ಬ ಭಾರತೀಯ ಆಟಗಾರ ಲಿಯೋನ್ ಲೂಕ್ ಮೆಂಡೋನ್ಸಾ ಸತತ ಎರಡು ಸೋಲುಗಳ ಬಳಿಕ ತಿರುಗೇಟು ನೀಡಿದ್ದಾರೆ. ಲಿಯೋನ್ ಹಿರಿಯ ಆಟಗಾರ ಪೆಂಟಲ ಹರಿಕೃಷ್ಣ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು.
ಏತನ್ಮಧ್ಯೆ ಡಿ.ಗುಕೇಶ್, ವಿಶ್ವದ ನಂ.2 ಆಟಗಾರ ಫ್ಯಾಬಿಯಾನೊ ಕರೂನಾ ವಿರುದ್ಧ ಕ್ಷಿಪ್ರ ಡ್ರಾ ಸಾಧಿಸಿದರು.







