ಟಾಟಾ ಸ್ಟೀಲ್ ಚೆಸ್: ಗುಕೇಶ್ ಜತೆ ಅಗ್ರಸ್ಥಾನಕ್ಕೇರಿದ ಪ್ರಜ್ಞಾನಂದ

x.com/ChessbaseIndia
ಹೊಸದಿಲ್ಲಿ: ಹಾಲೆಂಡ್ನ ವಿಜ್ಕ್ ಆನ್ ಝೀನಲ್ಲಿ ನಡೆಯುತ್ತಿರುವ 87ನೇ ಟಾಟಾ ಸ್ಟೀಲ್ ಚೆಸ್ ಟೂರ್ನಿಯ ಉಪಾಂತ್ಯದ ಸುತ್ತಿನಲ್ಲಿ ಶನಿವಾರ ಭಾರತೀಯ ಪಟುಗಳು ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದರು. ಸೆರ್ಬಿಯಾದ ಅಲೆಕ್ಸಿ ಸರಾನಾ ಅವರನ್ನು ಸೋಲಿಸುವ ಮೂಲಕ ಆರ್.ಪ್ರಜ್ಞಾನಂದ ಟೂರ್ನಿಯಲ್ಲಿ ಆರನೇ ಗೆಲುವು ಸಾಧಿಸಿದರು. ಈ ಸಾಧನೆಯೊಂದಿಗೆ ಮತ್ತೊಬ್ಬ ಭಾರತೀಯ ಚೆಸ್ ತಾರೆ ಡಿ.ಗುಕೇಶ್ ಜತೆ ಜಂಟಿ ಅಗ್ರಸ್ಥಾನಕ್ಕೇರಿದರು.
ಬಿಳಿಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ ಆಲ್ ಪಾನ್ ಓಪನಿಂಗ್ ಶೈಲಿಯನ್ನು ಅನುಸರಿಸಿದರು. ಆರಂಭದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸರಾನಾ ಅವರು ಪ್ರಜ್ಞಾನಂದ ಅವರ ಕೆಲ ಕಾಯಿಗಳನ್ನು ಹೊಡೆದರು. ಆದರೂ ಮೊದಲ ನಡೆಯ ಪ್ರಯೋಜನದೊಂದಿಗೆ ಪ್ರಜ್ಞಾನಂದ ಅಟದ ಗತಿ ಸಾಗಿದಂತೆ ಪ್ರಾಬಲ್ಯ ಸ್ಥಾಪಿಸಿದರು. 21ನೇ ನಡೆಯಲ್ಲಿ ಎನ್ ಬಿ5 ತಂತ್ರವನ್ನು ತಪ್ಪಾಗಿ ಅರ್ಥೈಸಿಕೊಂಡ ಸೆರ್ಬಿಯಾ ಆಟಗಾರನ ವಿರುದ್ಧ ಈ ಹಂತದಲ್ಲಿ ಭಾರತೀಯ ಗ್ರ್ಯಾಂಡ್ಮಾಸ್ಟರ್ ಬಿಗಿಹಿಡಿತ ಸಾಧಿಸಿದರು.
ಅರೋಗ್ಯ ಮತ್ತು ಕಳಪೆ ಫಾರ್ಮ್ ಸಮಸ್ಯೆಯಿಂದ ಟೂರ್ನಿಯುದ್ದಕ್ಕೂ ಹೆಣಗಿದ ಅರ್ಜುನ್ ಎರಿಗೈಸಿ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದರು. ನಂಬಲಸಾಧ್ಯ ಫಲಿತಾಂಶದಲ್ಲಿ, ಟೂರ್ನಿಯುದ್ದಕ್ಕೂ ಅಜೇಯರಾಗಿ ಉಳಿದಿದ್ದ ಉಜ್ಬೆಕಿಸ್ತಾನದ ಆಟಗಾರ ನೊದಿರ್ಬೆಕ್ ಅಬ್ದುಸತ್ತರೋವ್ ವಿರುದ್ಧ ಗೆಲುವು ಸಾಧಿಸಿದರು. ಪ್ರಶಸ್ತಿ ಸೆಣೆಸಾಟದಲ್ಲಿ ಮುಂಚೂಣಿಯಲ್ಲಿದ್ದ ಅಬ್ದುಸತ್ತರೊವ್ ಇದೀಗ ಇಬ್ಬರು ಭಾರತೀಯರಿಗಿಂತ ಒಂದು ಅಂಕ ಹಿನ್ನಡೆಯಲ್ಲಿದ್ದಾರೆ.
ಹನ್ನೆರಡನೇ ಸುತ್ತಿನ ಕೊನೆಗೆ ತಲಾ 8.5 ಅಂಕ ಪಡೆದಿರು ಪ್ರಜ್ಞಾನಂದ ಹಾಗೂ ಗುಕೇಶ್ ಅಗ್ರಸ್ಥಾನದಲ್ಲಿದ್ದಾರೆ. ನೊದಿರ್ಬೆಕ್ ಅಬ್ದುಸತ್ತರೋವ್ 7.5 ಅಂಕ ಹಾಗೂ ವ್ಲಾದಿಮಿರ್ ಫೆಡೊಸೀವ್ 7 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಚಾಲೆಂಜರ್ಸ್ ವಿಭಾಗದಲ್ಲಿ ಐದಿನ್ ಸುಲೈಮಾನ್ಲಿ, ಇರ್ವಿನ್ ಐಯಾಮಿ, ಥಾಯಿ ದೈ ವಾನ್ ಗ್ಯುಯೆನ್ ತಲಾ 8.5 ಅಂಕಗಳನ್ನು ಕಲೆಹಾಕಿ ಅಗ್ರಸ್ಥಾನದಲ್ಲಿದ್ದಾರೆ.







