ಥಾಯ್ಲೆಂಡ್ ಮಾಸ್ಟರ್ಸ್ 2024: ಅಶ್ಮಿತಾ ಚಲಿಹಾ ಸೆಮಿ ಫೈನಲ್ ಗೆ
ಮಿಥುನ್ ಮಂಜುನಾಥ್, ಟ್ರೀಸಾ-ಗಾಯತ್ರಿ ಸವಾಲು ಅಂತ್ಯ

ಅಶ್ಮಿತಾ ಚಲಿಹಾ | Photo : X
ಬ್ಯಾಂಕಾಕ್: ಇಂಡೋನೇಶ್ಯದ ಎಸ್ತರ್ ನುರುಮಿ ವಾರ್ಡೊಯೊರನ್ನು ನೇರ ಗೇಮ್ ಗಳ ಅಂತರದಿಂದ ಮಣಿಸಿದ ಭಾರತದ ಅಶ್ಮಿತಾ ಚಲಿಹಾ ಥಾಯ್ಲೆಂಡ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ಗೆ ತಲುಪಿದ್ದಾರೆ.
ಮಿಥುನ್ ಮಂಜುನಾಥ್ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ, ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಮಹಿಳೆಯರ ಡಬಲ್ಸ್ನ ಅಂತಿಮ-8ರ ಹಂತದಲ್ಲಿ ಸೋಲನುಭವಿಸಿ ಸೂಪರ್-300 ಟೂರ್ನಮೆಂಟ್ನಿಂದ ನಿರ್ಗಮಿಸಿದ್ದಾರೆ. ಹೀಗಾಗಿ 24ರ ಹರೆಯದ ಅಶ್ಮಿತಾ ಮಾತ್ರ ಸ್ಪರ್ಧೆಯಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.
ವಿಶ್ವದ ನಂ.61ನೇ ಆಟಗಾರ್ತಿ ಅಶ್ಮಿತಾ 57 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 44ನೇ ರ್ಯಾಂಕಿನ ಎಸ್ಟರ್ ನುರುಮಿ ಅವರನ್ನು 21-14, 19-21, 21-13 ಗೇಮ್ ಗಳ ಅಂತರದಿಂದ ಮಣಿಸಿದ್ದಾರೆ.
ಮೊದಲ ಗೇಮ್ನಲ್ಲಿ ಅಶ್ವಿತಾ ಹಾಗೂ ಎಸ್ಟರ್ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಒಂದು ಹಂತದಲ್ಲಿ ಇಂಡೋನೇಶ್ಯ ಆಟಗಾರ್ತಿ 14-10 ಮುನ್ನಡೆಯಲ್ಲಿದ್ದರು. ಆಗ ಮರು ಹೋರಾಟ ನೀಡಿದ ಅಶ್ಮಿತಾ 14-14ರಿಂದ ಸಮಬಲಗೊಳಿಸಿದರು. ಸತತ 7 ಅಂಕ ಗಳಿಸಿದ ಅಶ್ಮಿತಾ ಮೊದಲ ಗೇಮನ್ನು ವಶಪಡಿಸಿಕೊಂಡರು.
ಅಸ್ಸಾಂ ಆಟಗಾರ್ತಿ ಅಶ್ಮಿತಾ ಎರಡನೇ ಸೆಟ್ಟನ್ನು 19-21 ಅಂತರದಿಂದ ಸೋತರು. ಆದರೆ ಮೂರನೇ ಗೇಮ್ನಲ್ಲಿ ತಿರುಗೇಟು ನೀಡಿದ ಅಶ್ಮಿತಾ ಎದುರಾಳಿಗೆ ಒಮ್ಮೆಯೂ ಮುನ್ನಡೆ ಬಿಟ್ಟುಕೊಡಲಿಲ್ಲ. ಅಂತಿಮವಾಗಿ 21-13 ಅಂತರದಿಂದ ಜಯ ಸಾಧಿಸಿದರು.
ಅಶ್ಮಿತಾ ಸೆಮಿ ಫೈನಲ್ನಲ್ಲಿ ಥಾಯ್ಲೆಂಡಿನ ಸುಪನಿದಾ ಕಟೆಥೊಂಗ್ ಅಥವಾ ಚೈನೀಸ್ ತೈಪೆಯ ವೆನ್ ಚಿ ಸು ಅವರನ್ನು ಎದುರಿಸಲಿದ್ದಾರೆ.
ಇದೇ ವೇಳೆ, ಆರನೇ ಶ್ರೇಯಾಂಕದ ಡಬಲ್ಸ್ ಜೋಡಿ ಟ್ರೀಸಾ ಹಾಗೂ ಗಾಯತ್ರಿ ಇಂಡೋನೇಶ್ಯದ 4ನೇ ಶ್ರೇಯಾಂಕದ ಫೆಬ್ರಿಯಾನಾ ದ್ವಿಪುಜಿ ಕುಸುಮಾ ಹಾಗೂ ಅಮಾಲಿಯಾ ಪ್ರಥ್ವಿ ವಿರುದ್ಧ ಒಂದು ಗಂಟೆ, 7 ನಿಮಿಷಗಳ ಕಾಲ ನಡೆದ ಅಂತಿಮ-8ರ ಪಂದ್ಯದಲ್ಲಿ 12-21, 21-17, 21-23 ಅಂತರದಿಂದ ಸೋತಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಹಾಗೂ ವಿಶ್ವದ ನಂ.63ನೇ ಆಟಗಾರ ಮಂಜುನಾಥ್ 43 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಡಚ್ನ ಮಾರ್ಕ್ ಕಾಲ್ಜೋವ್ ವಿರುದ್ಧ 19-21, 15-21 ಅಂತರದಿಂದ ಸೋತಿದ್ದಾರೆ.







