ಭಾರತ, ಖತರ್ ನಲ್ಲಿ ಸೆ.11ರಿಂದ ಮೂರನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್
ಹೊಸದಿಲ್ಲಿ : ಬಹು ನಿರೀಕ್ಷಿತ ಮೂರನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್ಸಿ) ಭಾರತ ಹಾಗೂ ಖತರ್ ನಲ್ಲಿ ಈ ವರ್ಷದ ಸೆಪ್ಟಂಬರ್ 11ರಿಂದ ಅಕ್ಟೋಬರ್ 5ರ ತನಕ ನಡೆಯಲಿದೆ.
ಹಬ್ಬದ ಋತುವಿನಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಜ್ವರವನ್ನು ಹೆಚ್ಚಿಸುವ ನಿರೀಕ್ಷೆ ಇದೆ.
2023ರ ಡಿಸೆಂಬರ್ ನಲ್ಲಿ ಕೊನೆಗೊಂಡಿರುವ ಎರಡನೇ ಆವೃತ್ತಿಯ ಎಲ್ಎಲ್ಸಿ ಭಾರೀ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಈ ಬಾರಿ ಎರಡು ದೇಶಗಳಲ್ಲಿ 34 ಪಂದ್ಯಗಳನ್ನು ಆಡಲಾಗುತ್ತದೆ. ಈ ಅವಧಿಯಲ್ಲಿ ಪ್ರಮುಖ ಕ್ರಿಕೆಟ್ ಟೂರ್ನಿಗಳು ನಡೆಯದ ಕಾರಣ ಟೂರ್ನಿಯು ಕುತೂಹಲ ಕೆರಳಿಸಿದೆ.
ರೋಚಕ ಪಂದ್ಯಗಳು ಹಾಗೂ ಗರಿಷ್ಠ ವೀಕ್ಷಕರನ್ನು ಹೊಂದಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಈ ಹಿಂದಿನ ಆವೃತ್ತಿಗಳಲ್ಲಿ 19 ಪಂದ್ಯಗಳು ನಡೆದಾಗ ಭಾರತದಾದ್ಯಂತ 180 ಮಿಲಿಯನ್ ವೀಕ್ಷಕರನ್ನು ಸೆಳೆದಿತ್ತು. ಈ ಬಾರಿ ವೇಳಾಪಟ್ಟಿಯನ್ನು ವಿಸ್ತರಿಸಲಾಗಿದ್ದು ಹೆಚ್ಚಿನ ಸ್ಟಾರ್ ಆಟಗಾರರು ಲಭ್ಯವಿರಲಿದ್ದಾರೆ. ಹೀಗಾಗಿ ಮುಂಬರುವ ಆವೃತ್ತಿಯ ಟೂರ್ನಿಯು ಇನ್ನಷ್ಟು ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆಯಿದೆ.
ಈ ಹಿಂದೆ ಭಾರತದಲ್ಲಿ ನಡೆದಿದ್ದ ಎಲ್ಎಲ್ಸಿಯಲ್ಲಿ ಮಾಜಿ ಅಂತರ್ರಾಷ್ಟ್ರೀಯ ಆಟಗಾರರಾದ ಸುರೇಶ್ ರೈನಾ, ಆ್ಯರೊನ್ ಫಿಂಚ್, ಮಾರ್ಟಿನ್ ಗಪ್ಟಿಲ್, ಗೌತಮ್ ಗಂಭೀರ್, ಕ್ರಿಸ್ ಗೇಲ್, ಹಾಶಿಂ ಅಮ್ಲ, ರಾಸ್ ಟೇಲರ್ ಸಹಿತ ಹಲವರು 110 ಇತರ ಲೆಜೆಂಡರಿ ಕ್ರಿಕೆಟಿಗರೊಂದಿಗೆ ತಮ್ಮ ಕೌಶಲ್ಯ ಪ್ರದರ್ಶಿಸಿದ್ದರು.
ಹರ್ಭಜನ್ ಸಿಂಗ್ ನೇತೃತ್ವದ ಮಣಿಪಾಲ್ ಟೈಗರ್ಸ್ 2023ರ ಆವೃತ್ತಿಯಲ್ಲಿ ಚಾಂಪಿಯನ್ ಶಪ್ ಜಯಿಸಿತ್ತು.







