ಲಂಡನ್ನಲ್ಲಿ ತುಷಾರ್ ದೇಶಪಾಂಡೆಗೆ ಪಾದದ ಶಸ್ತ್ರಚಿಕಿತ್ಸೆ
ತುಷಾರ್ ದೇಶಪಾಂಡೆ | PC : Instagram/@tushardeshpande96
ಮುಂಬೈ : ಭಾರತ ಹಾಗೂ ಮುಂಬೈ ತಂಡದ ವೇಗದ ಬೌಲರ್ ತುಷಾರ್ ದೇಶಪಾಂಡೆ ಇತ್ತೀಚೆಗೆ ಕೊನೆಗೊಂಡಿರುವ ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಿಂದ ವಂಚಿತರಾಗಿದ್ದು, ಲಂಡನ್ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಬಲಗೈ ವೇಗದ ಬೌಲರ್ ದೇಶಪಾಂಡೆ ಮಂಗಳವಾರ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ತನ್ನ ಸರ್ಜರಿಯ ಕುರಿತು ಮಾಹಿತಿ ನೀಡಿದ್ದಾರೆ. ಮುಂಬರುವ ರಣಜಿ ಟ್ರೋಫಿ ಋತುವಿಗೆ ಪ್ರಕಟಿಸಿರುವ ಮುಂಬೈ ತಂಡದ 30 ಸದಸ್ಯರ ಸಂಭಾವ್ಯ ಆಟಗಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ.
ನಿನ್ನೆ ನನ್ನ ಶಸ್ತ್ರಚಿಕಿತ್ಸೆ ನಡೆದಿದ್ದು, ಇದೀಗ ನಾನು ಚೇತರಿಸಿಕೊಳ್ಳುತ್ತಿರುವೆ ಎಂದು ಜುಲೈನಲ್ಲಿ ಭಾರತದ ಝಿಂಬಾಬ್ವೆ ಪ್ರವಾಸದ ವೇಳೆ ಅಂತರ್ರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿರುವ ದೇಶಪಾಂಡೆ ಹೇಳಿದ್ದಾರೆ.
2023-24ರ ಋತುವಿನಲ್ಲಿ 5 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಕಬಳಿಸಿದ್ದ ದೇಶಪಾಂಡೆ ಮುಂಬೈ ಕ್ರಿಕೆಟ್ ತಂಡವು 43ನೇ ಬಾರಿ ರಣಜಿ ಟ್ರೋಫಿ ಜಯಿಸಿ ದಾಖಲೆ ನಿರ್ಮಿಸಲು ನೆರವಾಗಿದ್ದರು.
ಹಾಲಿ ಚಾಂಪಿಯನ್ ಮುಂಬೈ ತಂಡ 2024-25ರ ಸಾಲಿನ ರಣಜಿ ಟ್ರೋಫಿಯಲ್ಲಿ ಅಕ್ಟೋಬರ್ 11ರಂದು ಬರೋಡಾ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.