ಉರುಗ್ವೆ ಫುಟ್ಬಾಲ್ ದಂತಕತೆ ಎಡಿನ್ಸನ್ ಕವಾನಿ ನಿವೃತ್ತಿ

ಎಡಿನ್ಸನ್ ಕವಾನಿ | PC : X
ಹೊಸದಿಲ್ಲಿ : ಉರುಗ್ವೆಯ ಫುಟ್ಬಾಲ್ ಮಾಂತ್ರಿಕ ಎಡಿನ್ಸನ್ ಕವಾನಿ ಅಂತರ್ರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿ ಘೋಷಿಸಿದ್ದಾರೆ.
37 ವರ್ಷದ ಕವಾನಿ ‘ಎಲ್ ಮೆಟಾಡೊರ್’ ಎಂಬ ಅಡ್ಡ ಹೆಸರಿನಿಂದಲೇ ಹೆಚ್ಚು ಪರಿಚಿತರು. ಅವರು ಉರುಗ್ವೆ ಫುಟ್ಬಾಲ್ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಅವರು ದೇಶದ ಎರಡನೇ ಗರಿಷ್ಠ ಸಾರ್ವಕಾಲಿಕ ಗೋಲು ಗಳಿಕೆದಾರ ಆಗಿದ್ದಾರೆ ಮತ್ತು ದೇಶದ ಪರವಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಅವರು ಉರುಗ್ವೆ ಪರವಾಗಿ 136 ಪಂದ್ಯಗಳಲ್ಲಿ 58 ಗೋಲುಗಳನ್ನು ಬಾರಿಸಿದ್ದಾರೆ. ಅವರು 2010, 2014, 2018 ಮತ್ತು 2022- ಒಟ್ಟು ನಾಲ್ಕು ಫಿಫಾ ವಿಶ್ವಕಪ್ ಗಳಲ್ಲಿ ಉರುಗ್ವೆ ಪರವಾಗಿ ಆಡಿದ್ದಾರೆ.
2010ರಲ್ಲಿ ಉರುಗ್ವೆಯು ಸೆಮಿಫೈನಲ್ ತಲುಪಿತ್ತು. ಆ ಪಂದ್ಯಾವಳಿಯಲ್ಲಿ ಅವರು ಶ್ರೇಷ್ಠ ಪ್ರದರ್ಶನ ನೀಡಿದ್ದರು.
2011ರಲ್ಲಿ, ಅವರನ್ನು ಒಳಗೊಂಡ ಉರುಗ್ವೆ ತಂಡವು ಅರ್ಜೆಂಟೀನದಲ್ಲಿ ನಡೆದ ಕೋಪ ಅಮೆರಿಕ ಪಂದ್ಯಾವಳಿಯಲ್ಲಿ ಪ್ರಶಸ್ತಿ ಜಯಿಸಿತ್ತು. ಅದು ಅವರ ಶ್ರೇಷ್ಠ ಸಾಧನೆಯಾಗಿದೆ.
‘‘ಇಂದು ನಾನು ನಿವೃತ್ತಿಗೊಳ್ಳಲು ನಿರ್ಧರಿಸಿದ್ದೇನೆ. ಆದರೆ ನಾನು ತಂಡದಲ್ಲಿರುವಾಗ ಯಾವ ರೀತಿ ಇದ್ದೆನೋ, ಅದೇ ರೀತಿ ಯಾವತ್ತೂ ನಿಮ್ಮ ಸಾಧನೆಯನ್ನು ಗಮನಿಸುತ್ತಿರುತ್ತೇನೆ’’ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಸಂದೇಶವೊಂದರಲ್ಲಿ ತನ್ನ ತಂಡವನ್ನುದ್ದೇಶಿಸಿ ಹೇಳಿದ್ದಾರೆ.
ಅವರು ನಪೊಲಿ, ಪ್ಯಾರಿಸ್ ಸೇಂಟ್ ಜರ್ಮೈನ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಮುಂತಾದ ಯುರೋಪಿಯನ್ ಫುಟ್ಬಾಲ್ ಕ್ಲಬ್ಗಳ ಪರವಾಗಿ ಆಡಿದ್ದಾರೆ. ಪ್ರಸಕ್ತ ಅವರು ಅರ್ಜೆಂಟೀನದ ಬೊಕ ಜೂನಿಯರ್ಸ್ ಕ್ಲಬ್ ಪರವಾಗಿ ಆಡುತ್ತಿದ್ದಾರೆ.







