2 ದಿನಗಳಲ್ಲಿ ಮನೆ ಧ್ವಂಸ ಮಾಡುತ್ತೇವೆ | ಪಿಸ್ತೂಲ್ ಕೋಚ್ ಸಮರೇಶ್ ಜಂಗ್ಗೆ ನೋಟಿಸ್

ಸಮರೇಶ್ ಜಂಗ್ | PC : NDTV
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕಗಳನ್ನು ಪಡೆದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ರಿಗೆ ತರಬೇತಿ ನೀಡಿರುವ ರಾಷ್ಟ್ರೀಯ ಪಿಸ್ತೂಲ್ ಶೂಟಿಂಗ್ ಕೋಚ್ ಸಮರೇಶ್ ಜಂಗ್ ಸಂಭ್ರಮದಿಂದ ಮನೆಗೆ ಮರಳಿದ್ದಾರೆ. ಆದರೆ, ಮನೆಯಲ್ಲಿ ಅವರ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ನಿಮ್ಮ ಹಾಗೂ ಪಕ್ಕದ ಮನೆಗಳನ್ನು ಎರಡು ದಿನಗಳಲ್ಲಿ ಧ್ವಂಸಗೊಳಿಸಲಾಗುವುದು ಎಂಬ ನೋಟಿಸನ್ನು ಅವರಿಗೆ ನೀಡಲಾಗಿದೆ.
ಸ್ವತಃ ಒಲಿಂಪಿಯನ್ ಆಗಿರುವ ಸಮರೇಶ್ ಜಂಗ್ರ ಹೊಸದಿಲ್ಲಿಯ ಸಿವಿಲ್ ಲೈನ್ಸ್ ಪ್ರದೇಶದ ಖೈಬರ್ ಪಾಸ್ನಲ್ಲಿರುವ ಮನೆಯನ್ನು ಧ್ವಂಸಗೊಳಿಸಲಾಗುವುದು ಎಂಬ ಮಾಹಿತಿ ನೀಡುವ ನೋಟಿಸನ್ನು ಅವರು ಸ್ವೀಕರಿಸಿದ್ದಾರೆ. ಇದೇ ರೀತಿಯ ನೋಟಿಸ್ಗಳನ್ನು ಅವರ ನೆರೆಯ ಮನೆಗಳಿಗೂ ನೀಡಲಾಗಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಭೂಮಿ ಮತ್ತು ಅಭಿವೃದ್ಧಿ ಕಚೇರಿಯು ಈ ನೋಟಿಸ್ಗಳನ್ನು ನೀಡಿದೆ. ಖೈಬರ್ ಪಾಸ್ ಬಡಾವಣೆಯನ್ನು ರಕ್ಷಣಾ ಸಚಿವಾಲಯಕ್ಕೆ ಸೇರಿದ ಜಮೀನಿನಲ್ಲಿ ನಿರ್ಮಿಸಲಾಗಿದೆ, ಹಾಗಾಗಿ, ಈ ಕಟ್ಟಡಗಳು ಅಕ್ರಮವಾಗಿವೆ ಎಂಬುದಾಗಿ ನೋಟಿಸ್ನಲ್ಲಿ ತಿಳಿಸಲಾಗಿದೆ.
ಮನೆ ಧ್ವಂಸಕ್ಕೆ ಕೊಟ್ಟಿರುವ ಕಾರಣಗಳ ಬಗ್ಗೆ ಅರ್ಜುನ ಪ್ರಶಸ್ತಿ ವಿಜೇತ ಸಮರೇಶ್ ಜಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
‘‘ಇದು ರಕ್ಷಣಾ ಸಚಿವಾಲಯಕ್ಕೆ ಸೇರಿದ ಭೂಮಿ ಎನ್ನುವುದು ನನಗೆ ಗೊತ್ತೇ ಇರಲಿಲ್ಲ. ಇಡೀ ಬಡಾವಣೆಯೇ ಅಕ್ರಮ ಎಂಬುದಾಗಿ ಅವರು ಘೋಷಿಸಿದ್ದಾರೆ. ನನ್ನ ಕುಟುಂಬವು 1950ರ ದಶಕದಿಂದಲೂ 75 ವರ್ಷಗಳಿಂದ ಇಲ್ಲೇ ವಾಸಿಸುತ್ತಿದೆ. ನಾವು ನ್ಯಾಯಾಲಯಕ್ಕೆ ಹೋಗಿದ್ದೇವೆ. ಆದರೆ ನಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ’’ ಎಂದು ಐಎಎನ್ಎಸ್ನೊಂದಿಗೆ ಮಾತನಾಡುತ್ತಾ ಜಂಗ್ ಹೇಳಿದರು.
ಎರಡು ದಿನಗಳಲ್ಲಿ ಮನೆ ತೊರೆಯುವಂತೆ ನಮಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
‘‘ನಮಗೆ ಸ್ವಲ್ಪ ಸಮಯ ಬೇಕು. ನಾಳೆ ನಾವು ಮನೆಯನ್ನು ತೊರೆಯಬೇಕೆಂದು ನೀವು ಇವತ್ತು ಹೇಳಿದರೆ, ಹಾಗೆ ಮಾಡಲು ನಮಗೆ ಸಾಧ್ಯವಾಗುವುದಿಲ್ಲ’’ ಎಂದು ಅವರು ನುಡಿದರು.
ಯಶಸ್ವಿ ಶೂಟರ್ ಆಗಿರುವ ಜಂಗ್, ಮೆಲ್ಬರ್ನ್ನಲ್ಲಿ ನಡೆದ 2006ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ 5 ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗೆದ್ದಿದ್ದರು.
ಅವರು ತನ್ನ ಹತಾಶೆಯನ್ನು ಗುರುವಾರ ಸಂಜೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಮನೆಗಳನ್ನು ಧ್ವಂಸಗೊಳಿಸಲು ಕೇವಲ ಎರಡು ದಿನಗಳ ನೋಟಿಸ್ ನೀಡಿರುವ ಭೂಮಿ ಮತ್ತು ಅಭಿವೃದ್ಧಿ ಕಚೇರಿಯ ಕ್ರಮದ ಬಗ್ಗೆ ಅವರು ಆಘಾತ ವ್ಯಕ್ತಪಡಿಸಿದ್ದಾರೆ.
‘‘ಭಾರತೀಯ ಶೂಟರ್ಗಳು ಒಲಿಂಪಿಕ್ಸ್ನಲ್ಲಿ ಎರಡು ಪದಕಗಳನ್ನು ಗೆದ್ದ ಸಂಭ್ರಮದೊಂದಿಗೆ, ತಂಡದ ಕೋಚ್ ಆಗಿರುವ ನಾನು ಮನೆಗೆ ಮರಳಿದಾಗ ಆಘಾತ ಕಾದಿತ್ತು. ನನ್ನ ಮನೆ ಮತ್ತು ಇಡೀ ಬಡಾವಣೆಯನ್ನು ಎರಡು ದಿನಗಳಲ್ಲಿ ಧ್ವಂಸಗೊಳಿಸಲಾಗುವುದು ಎಂಬ ಆಘಾತವನ್ನು ಅವರು ನಮಗೆ ನೀಡಿದ್ದಾರೆ’’ ಎಂದು ಗುರುವಾರ ರಾತ್ರಿ ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಅವರು ತನ್ನ ಸಂದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಮುಖ್ಯಸ್ಥೆ ಪಿ.ಟಿ. ಉಷಾ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಮತ್ತು ಐಒಎ ಉಪಾಧ್ಯಕ್ಷ ಹಾಗೂ ಮಾಜಿ ಶೂಟರ್ ಗಗನ್ ನಾರಂಗ್ ಮುಂತಾದವರನ್ನು ಟ್ಯಾಗ್ ಮಾಡಿದ್ದಾರೆ.







