ವಿಂಬಲ್ಡನ್ ಪ್ರಶಸ್ತಿ ಮೊತ್ತ ದಾಖಲೆಯ 530 ಕೋಟಿ ರೂ.ಗೆ ಏರಿಕೆ

ವಿಂಬಲ್ಡನ್ ಪ್ರಶಸ್ತಿ | PC : NDTV
ಲಂಡನ್: ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿ ಮೊತ್ತವನ್ನು ದಾಖಲೆಯ 50 ಮಿಲಿಯ ಪೌಂಡ್ (ಸುಮಾರು 530 ಕೋಟಿ ರೂಪಾಯಿ)ಗೆ ಏರಿಸಲಾಗಿದೆ. ಪ್ರಶಸ್ತಿ ಮೊತ್ತವನ್ನು ಏರಿಸುವ ಸಂಘಟಕ ಸಂಸ್ಥೆ ಎಇಎಲ್ಟಿಸಿಯ ನಿರ್ಧಾರವು ಟೆನಿಸ್ ಜಗತ್ತಿನಲ್ಲಿ ವಿಂಬಲ್ಡನ್ನ ಮಹತ್ವವನ್ನು ಬಿಂಬಿಸುತ್ತದೆ ಎಂಬುದಾಗಿ ಬಣ್ಣಿಸಲಾಗಿದೆ.
ಪುರುಷ ಮತ್ತು ಮಹಿಳಾ ಸಿಂಗಲ್ಸ್ ಚಾಂಪಿಯನ್ಗಳು ತಲಾ 2.7 ಮಿಲಿಯ ಪೌಂಡ್ (ಸುಮಾರು 28.50 ಕೋಟಿ ರೂಪಾಯಿ) ಮೊತ್ತವನ್ನು ಗಳಿಸಲಿದ್ದಾರೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಮೊದಲ ಸುತ್ತಿನಲ್ಲಿ ಸೋತವರೂ 60,000 ಪೌಂಡ್ (63.50 ಲಕ್ಷ ರೂಪಾಯಿ) ಪಡೆಯಲಿದ್ದಾರೆ. ಇದು ಭಾಗವಹಿಸುವ ಎಲ್ಲಾ ಆಟಗಾರರ ಬಗ್ಗೆ ಸಂಘಟಕರು ಹೊಂದಿರುವ ಸಮಾನತೆಯ ಮನೋಭಾವವನ್ನು ತೋರಿಸುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ.
ಜುಲೈ ಒಂದರಿಂದ 14ರವರೆಗೆ ನಡೆಯಲಿರುವ ಹುಲ್ಲು ಹಾಸಿನ ಅಂಗಳದ ವಿಂಬಲ್ಡನ್ ಪಂದ್ಯಾವಳಿಗೆ ಆಟಗಾರರು ಮತ್ತು ಪ್ರೇಕ್ಷಕರು ಇಬ್ಬರೂ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಟೆನಿಸ್ ಜಗತ್ತಿನಲ್ಲಿ ವಿಂಬಲ್ಡನ್ ಹೊಂದಿರುವ ಸಂಪ್ರದಾಯ, ಇತಿಹಾಸ ಮತ್ತು ಪ್ರತಿಷ್ಠೆ ಅಪ್ರತಿಮವಾಗಿದೆ. ಹಾಗಾಗಿ, ಜಗತ್ತಿನಾದ್ಯಂತ ಟೆನಿಸ್ ಅಭಿಮಾನಿಗಳು ಈ ಪಂದ್ಯಾವಳಿಗಾಗಿ ಕುತೂಹಲದಿಂದ ಕಾಯುತ್ತಿರುತ್ತಾರೆ.





