ಮಹಿಳೆಯರ ಏಶ್ಯಕಪ್ ಸೂಪರ್-4 ಪಂದ್ಯ |ನಾಳೆ(ಸೆ.10) ಭಾರತ- ಕೊರಿಯಾ ಸೆಣಸಾಟ

PC : PTI
ಹಾಂಗ್ಝೌ(ಚೀನಾ), ಸೆ.9: ಪಂದ್ಯಾವಳಿಯಲ್ಲಿ ಅಜೇಯವಾಗುಳಿದಿರುವ ಭಾರತೀಯ ಮಹಿಳೆಯರ ಹಾಕಿ ತಂಡವು ಏಶ್ಯ ಕಪ್ ಟೂರ್ನಿಯಲ್ಲಿ ಬುಧವಾರ ನಡೆಯಲಿರುವ ತನ್ನ ಮೊದಲ ಸೂಪರ್-4 ಹಂತದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದ್ದು, ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.
ಥಾಯ್ಲೆಂಡ್ ತಂಡವನ್ನು 11-0 ಅಂತರದಿಂದ ಮಣಿಸುವ ಮೂಲಕ ಭಾರತವು ಏಶ್ಯಕಪ್ನಲ್ಲಿ ತನ್ನ ಅಭಿಯಾನ ಆರಂಭಿಸಿತ್ತು. ಆ ನಂತರ ಜಪಾನ್ ವಿರುದ್ಧ 2-2ರಿಂದ ಡ್ರಾ ಸಾಧಿಸಿತ್ತು. ಕೊನೆಯ ಪಂದ್ಯದಲ್ಲಿ ಸಿಂಗಾಪುರ ತಂಡವನ್ನು 12-0 ಅಂತರದಿಂದ ಮಣಿಸುವ ಮೂಲಕ ಬಿ ಗುಂಪಿನಲ್ಲಿ ಅಗ್ರ ಸ್ಥಾನಕ್ಕೇರಿದೆ.
ಭಾರತವು ಏಶ್ಯಕಪ್ ಜಯಿಸಿ ಮುಂದಿನ ವರ್ಷ ಬೆಲ್ಜಿಯಂ ಹಾಗೂ ನೆದರ್ಲ್ಯಾಂಡ್ಸ್ ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ.
ವಿಶ್ವದ ನಂ.10ನೇ ತಂಡ ಭಾರತವು 12ನೇ ರ್ಯಾಂಕಿನ ಕೊರಿಯಾದ ವಿರುದ್ಧ ಫೇವರಿಟ್ ಆಗಿದೆ.
ಭಾರತವು ಕೊರಿಯಾದ ನಂತರ ಗುರುವಾರ ಚೀನಾ ಹಾಗೂ ಶನಿವಾರ ಜಪಾನ್ ತಂಡದ ವಿರುದ್ಧ ಸೂಪರ್-4 ಪಂದ್ಯಗಳನ್ನಾಡಲಿದೆ.
ಗ್ರೂಪ್ ಹಂತದಲ್ಲಿ ತಲಾ 5 ಗೋಲುಗಳನ್ನು ಗಳಿಸಿರುವ ನವನೀತ್ ಕೌರ್ ಹಾಗೂ ಮುಮ್ತಾಝ್ ಖಾನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಈ ಇಬ್ಬರು ಶ್ರೇಷ್ಠ ಪ್ರದರ್ಶನ ನೀಡುವತ್ತ ಚಿತ್ತಹರಿಸಿದ್ದಾರೆ.







