ಮಹಿಳೆಯರ ಟೇಬಲ್ ಟೆನಿಸ್ | ಕ್ವಾರ್ಟರ್ ಫೈನಲ್ ನಲ್ಲಿ ಎಡವಿದ ಭಾರತ ತಂಡ

PC : ANI
ಹೊಸದಿಲ್ಲಿ : ಕನ್ನಡತಿ ಅರ್ಚನಾ ಕಾಮತ್ ಕೊಂಚ ಪ್ರತಿರೋಧ ಒಡ್ಡಿದ್ದರೂ ಭಾರತ ಮಹಿಳಾ ತಂಡವು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ತಾಂತ್ರಿಕವಾಗಿ ಬಲಿಷ್ಠವಾಗಿರುವ ಜರ್ಮನಿ ಎದುರು ಕ್ವಾರ್ಟರ್ ಫೈನಲ್ನಲ್ಲಿ 1-3 ಅಂತರದಿಂದ ಸೋಲುಂಡಿದೆ.
ಈ ಮೂಲಕ ಟೇಬಲ್ ಟೆನಿಸ್ ತಂಡದ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಅಚಂತ ಶರತ್ ಕಮಲ್ ನೇತೃತ್ವದ ಪುರುಷರ ತಂಡ ಈ ಮೊದಲೇ ಗೇಮ್ಸ್ನಿಂದ ಹೊರ ನಡೆದಿತ್ತು. ಮಂಗಳವಾರ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಪ್ರಬಲ ಚೀನಾ ತಂಡದ ಎದುರು 0-3 ಅಂತರದಿಂದ ಸೋತಿತ್ತು.
ಬುಧವಾರ ಶ್ರೀಜಾ ಅಕುಲಾ ಹಾಗೂ ಅರ್ಚನಾ ಕಾಮತ್ ಮೊದಲ ಡಬಲ್ಸ್ ಪಂದ್ಯದಲ್ಲಿ ಜರ್ಮನಿಯ ಯುವಾನ್ ವಾನ್ ಹಾಗೂ ಷಿಯೊನಾ ಶಾ ಜೋಡಿ ವಿರುದ್ಧ 5-11, 11-8, 10-12, 6-11 ಅಂತರದಿಂದ ಸೋತಿದ್ದಾರೆ. ಶ್ರೀಜಾ ಹಾಗೂ ಅರ್ಚನಾ ಮೂರನೇ ಗೇಮ್ ತನಕ ಹೋರಾಟ ನೀಡಿದ್ದರು. ಅಂತಿಮವಾಗಿ ಪಂದ್ಯವನ್ನು ಕೈಚೆಲ್ಲಿದರು.
ಮೊದಲ ಸಿಂಗಲ್ಸ್ನಲ್ಲಿ ಭಾರತದ ಅಗ್ರ ಆಟಗಾರ್ತಿ ಮಣಿಕಾ ಬಾತ್ರ ಉತ್ತಮ ಲಯದಲ್ಲಿರಲಿಲ್ಲ. ಅವರು ಆ್ಯನೈಟ್ ಕಾಫ್ಮನ್ ವಿರುದ್ಧ ಮೊದಲ ಗೇಮ್ ಅನ್ನು 11-8ರಲ್ಲಿ ಗೆದ್ದುಕೊಂಡರೂ ಮುಂದಿನ 3 ಗೇಮ್ಗಳಲ್ಲಿ 5-11, 7-11, 5-11 ಅಂತರದಿಂದ ಸೋತಿದ್ದಾರೆ. ಆಗ ಜರ್ಮನಿಯು 2-0 ಮುನ್ನಡೆ ಪಡೆಯಿತು.
ಈ ಹಂತದಲ್ಲಿ ಅರ್ಚನಾ ಕಾಮತ್ 19-17, 1-11, 11-5, 11-9 ಅಂತರದಿಂದ ಶಿಯೊನಾ ಶಾನ್ ಅವರನ್ನು ಸೋಲಿಸಿ ತಂಡದ ಹಿನ್ನಡೆಯನ್ನು 1-2ಕ್ಕೆ ಇಳಿಸಿದರು.
ಮೂರನೇ ಸಿಂಗಲ್ಸ್ ಪಂದ್ಯದಲ್ಲಿ ಕಾಫ್ಮನ್ ಅವರು ಶ್ರೀಜಾ ಅವರನ್ನು 11-6, 11-7, 11-7 ಅಂತರದಿಂದ ಮಣಿಸಿ ಜರ್ಮನಿಯ ಗೆಲುವನ್ನು ಖಚಿತಪಡಿಸಿದರು.
ಸೋಮವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಮಣಿಕಾ, ಶ್ರೀಜಾ ಹಾಗೂ ಅರ್ಚನಾ ಅವರನ್ನು ಒಳಗೊಂಡ ಭಾರತ ತಂಡವು ಪ್ರಬಲ ರುಮೇನಿಯಾ ತಂಡವನ್ನು 3-2ರಿಂದ ರೋಚಕವಾಗಿ ಸೋಲಿಸಿ ಎಂಟರ ಘಟ್ಟ ತಲುಪಿದ್ದರು.
ಮಣಿಕಾ ಹಾಗೂ ಶ್ರೀಜಾ ಒಲಿಂಪಿಕ್ಸ್ನ ವೈಯಕ್ತಿಕ ಸ್ಪರ್ಧೆಯಲ್ಲಿ ಅಂತಿಮ-16ರ ಸುತ್ತು ತಲುಪಿದ ಭಾರತದ ಮೊದಲ ಆಟಗಾರ್ತಿಯರೆನಿಸಿಕೊಂಡು ಇತಿಹಾಸ ನಿರ್ಮಿಸಿದ್ದರು. ಆದರೆ ಇಬ್ಬರು ಅಂತಿಮ-16 ಘಟ್ಟವನ್ನು ದಾಟಲಿಲ್ಲ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪುರುಷರ ಹಾಗೂ ಮಹಿಳಾ ಟಿಟಿ ತಂಡಗಳು ಇದೇ ಮೊದಲ ಬಾರಿ ಭಾಗವಹಿಸುವ ಅರ್ಹತೆ ಪಡೆದಿದ್ದವು.







