ಮಹಿಳಾ ವಿಶ್ವಕಪ್: ನ್ಯೂಝಿಲೆಂಡ್ ವಿರುದ್ಧ ಜಯ; ಭಾರತ ಸೆಮಿಫೈನಲ್ಗೆ

PC: x.com/ani_digital
ನವಿ ಮುಂಬೈ: ಸ್ಮೃತಿ ಮಂದಾನ (95 ಎಸೆತಗಳಲ್ಲಿ 109) ಮತ್ತು ಪ್ರತೀಕಾ ರಾವಲ್ (134 ಎಸೆತಗಳಲ್ಲಿ 122) ಅವರ ಭರ್ಜರಿ ಶತಕಗಳ ನೆರವಿನಿಂದ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಲೀಗ್ ಹಂತದ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 53 ರನ್ ಗಳಿಂದ (ಡಿಎಲ್ಎಸ್ ವಿಧಾನ) ಸೋಲಿಸಿದ ಭಾರತ ನಾಲ್ಕನೇ ತಂಡವಾಗಿ ಸೆಮಿಫೈನಲ್ ಗೆ ರಹದಾರಿ ಪಡೆಯಿತು.
ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ವಿಜೇತ ತಂಡ ಸೆಮೀಸ್ ಹಂತಕ್ಕೆ ಅರ್ಹತೆ ಪಡೆಯುವ ಹಿನ್ನೆಲೆಯಲ್ಲಿ ಅಕ್ಷರಶಃ ಕ್ವಾರ್ಟರ್ ಫೈನಲ್ ಎನಿಸಿತ್ತು. ಭಾರತದ ಎರಡು ಶತಕಗಳಷ್ಟೇ ಪ್ರಮುಖವಾಗಿ ಆಡುವ 11ಕ್ಕೆ ಸೇರ್ಪಡೆಯಾದ ಜೆಮಿಮ್ಹಾ ರೋಡ್ರಿಗಸ್ ಕೇವಲ 55 ಎಸೆತಗಳಲ್ಲಿ 76 ರನ್ ಗಳನ್ನು ಸಿಡಿಸಿ ನಾಟೌಟ್ ಆಗಿ ಉಳಿದು ಭಾರತದ ಭರ್ಜರಿ ಮೊತ್ತಕ್ಕೆ ಕಾರಣರಾದರು. ನ್ಯೂಝಿಲೆಂಡ್ ದಾಳಿಯನ್ನು ಪುಡಿಗಟ್ಟಿದ ಭಾರತ ನಿಗದಿತ 49 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 340 ರನ್ ಕಲೆ ಹಾಕಿತು.
ತೇವಾಂಶ ಹೊಂದಿದ್ದ ಪಿಚ್ ನಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡದ್ದು ನ್ಯೂಜಿಲೆಂಡ್ ಪಾಲಿಗೆ ಮುಳುವಾಯಿತು. ಅಕಾಲಿಕ ಮಳೆಯಿಂದಾಗಿ 90 ನಿಮಿಷಗಳ ಆಟ ವ್ಯರ್ಥವಾಯಿತು. ಬಳಿಕ ನ್ಯೂಜಿಲೆಂಡ್ಗೆ 44 ಓವರ್ ಗಳಲ್ಲಿ 325 ರನ್ಗಳ ಗುರಿ ನಿಗದಿಪಡಿಸಲಾಯಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ನಿಗದಿತ ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 271 ರನ್ ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಬ್ರೂಕ್ ಹಲ್ಲಿಡೇ (84 ಎಸೆತಗಳಲ್ಲಿ 81) ಮತ್ತು ಇಸಬೆಲ್ಲಾ ಗಾಝ್ (51 ಎಸೆತಗಳಲ್ಲಿ 65) ಮಾತ್ರ ಪ್ರತಿರೋಧ ತೋರಿದರು. ಅಪಾಯಕಾರಿ ಬ್ಯಾಟ್ಸ್ಮನ್ ಅಮೇಲಿಯಾ ಕೆರ್ರ್, ಮಿಡ್ವ ವಿಕೆಟ್ ನಲ್ಲಿ ಮಂದಾನ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರು. ಅತಿಥೇಯ ಭಾರತ ತಂಡ ಇದೇ ಕ್ರೀಡಾಂಗಣದಲ್ಲಿ ಅಕ್ಟೋಬರ್ 30ರಂದು ನಡೆಯುವ ಎರಡನೇ ಸೆಮಿಫೈನಲ್ಸ್ ನಲ್ಲಿ ಆಡಲಿದೆ.







