ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ
ಆರನೇ ಬಾರಿ ಸೋಲುಂಡ ಹಾಲಿ ಚಾಂಪಿಯನ್

Photo : PTI
ಅಹ್ಮದಾಬಾದ್: ಬೆನ್ ಸ್ಟೋಕ್ಸ್(64 ರನ್, 90 ಎಸೆತ), ಡೇವಿಡ್ ಮಲನ್(50 ರನ್, 64 ಎಸೆತ), ಮೊಯಿನ್ ಅಲಿ(42 ರನ್, 43 ಎಸೆತ) ಹಾಗೂ ಕ್ರಿಸ್ ವೋಕ್ಸ್(32) ಸಾಹಸದ ಹೊರತಾಗಿಯೂ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯವು ಇಂಗ್ಲೆಂಡ್ ತಂಡವನ್ನು ವಿಶ್ವಕಪ್ ನ 36ನೇ ಪಂದ್ಯದಲ್ಲಿ 33 ರನ್ ಅಂತರದಿಂದ ಸೋಲಿಸಿತು.
ಶನಿವಾರ ಗೆಲ್ಲಲು 287 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ 48.1 ಓವರ್ಗಳಲ್ಲಿ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಆಸೀಸ್ ಪರ ಸ್ಪಿನ್ನರ್ ಆಡಮ್ ಝಾಂಪಾ(3-21)ಯಶಸ್ವಿ ಬೌಲರ್ ಎನಿಸಿಕೊಂಡರು. ಕಮಿನ್ಸ್(2-49) ಹಾಗೂ ಮಿಚೆಲ್ ಸ್ಟಾರ್ಕ್(2-66) ತಲಾ 2 ವಿಕೆಟ್ ಡಪೆದರು.
ಆಸ್ಟ್ರೇಲಿಯ 296 ರನ್ಗೆ ಆಲೌಟ್: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಆಸ್ಟ್ರೇಲಿಯ ತಂಡ ಕ್ರಿಸ್ ವೋಕ್ಸ್(4-54) ನೇತೃತ್ವದ ಇಂಗ್ಲೆಂಡ್ ಬೌಲರ್ಗಳ ಶಿಸ್ತುಬದ್ಧ ದಾಳಿಯ ಹೊರತಾಗಿಯೂ 49.3 ಓವರ್ಗಳಲ್ಲಿ 286 ರನ್ ಗಳಿಸಿ ಆಲೌಟಾಯಿತು.
ಆಸೀಸ್ ಪರ ಮಾರ್ನಸ್ ಲಾಬುಶೇನ್(71 ರನ್, 83 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ವೇಗಿಗಳಾದ ವೋಕ್ಸ್, ಮಾರ್ಕ್ ವುಡ್(2-70) ಹಾಗೂ ಲೆಗ್ ಸ್ಪಿನ್ನರ್ ಆದಿಲ್ ರಶೀದ್(2-38)ಹತ್ತು ತಂಡಗಳಿರುವ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯವನ್ನು 286 ರನ್ಗೆ ನಿಯಂತ್ರಿಸಿದರು. ವೋಕ್ಸ್ ಆಸೀಸ್ ಆರಂಭಿಕರಾದ ಟ್ರಾವಿಸ್ ಹೆಡ್(11) ಹಾಗೂ ಡೇವಿಡ್ ವಾರ್ನರ್(15) ವಿಕೆಟನ್ನು ಬೇಗನೆ ಉರುಳಿಸಿದರು. ಆಗ ಜೊತೆಯಾದ ಲಾಬುಶೇನ್ ಹಾಗೂ ಸ್ಮಿತ್ 3 ವಿಕೆಟ್ಗೆ 75 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಈ ಜೋಡಿಯನ್ನು ರಶೀದ್ ಬೇರ್ಪಡಿಸಿದರು. ರಶೀದ್ 44 ರನ್ ಗಳಿಸಿದ್ದ ಸಿತ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಜೋಶ್ ಇಂಗ್ಲಿಸ್(3)ಬೇಗನೆ ಔಟಾದರು. ಅರ್ಧಶತಕ ಪೂರೈಸಿದ ಲಾಬುಶೇನ್ ಅವರು ಕ್ಯಾಮರೂನ್ ಗ್ರೀನ್(47 ರನ್)ಅವರೊಂದಿಗೆ 61 ರನ್ ಜೊತೆಯಾಟ ನಡೆಸಿದರು.
ಲಾಬುಶೇನ್ ಅವರು ವುಡ್ಗೆ ವಿಕೆಟ್ ಒಪ್ಪಿಸಿದರು. ಮ್ಯಾಕ್ಸ್ವೆಲ್ ಹಾಗೂ ಮಿಚೆಲ್ ಮಾರ್ಷ್ ಬದಲಿಗೆ ಆಡಿದ ಗ್ರೀನ್ ಹಾಗೂ ಮಾರ್ಕಸ್ ಸ್ಟೋನಿಸ್ 6ನೇ ವಿಕೆಟ್ಗೆ 45 ರನ್ ಸೇರಿಸಿದರು. ಎಡಗೈ ವೇಗಿ ಡೇವಿಡ್ ವಿಲ್ಲಿ ಅವರು ಗ್ರೀನ್ಗೆ ಅರ್ಧಶತಕ ನಿರಾಕರಿಸಿದರು. ಸ್ಟೋನಿಸ್(35 ರನ್)ಸ್ಪಿನ್ನರ್ ಲಿವಿಂಗ್ಸ್ಟೋನ್ಗೆ ಔಟಾದರು.
10ನೇ ಕ್ರಮಾಂಕದ ಆಟಗಾರ ಆಡಮ್ ಝಾಂಪಾ 19 ಎಸೆತಗಳಲ್ಲಿ 29 ರನ್ ಗಳಿಸಿ ಆಸೀಸ್ ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು.







