ಕಾಂಗ್ರೆಸ್ ನ 4 ಶಾಸಕರಿಗೆ ಬಿಎಸ್ ವೈ ಆಪ್ತನಿಂದ 50 ಕೋಟಿ ರೂ., ಮಂತ್ರಿ ಸ್ಥಾನದ ಆಮಿಷ: ಶಾಸಕ ರವಿ ಗಣಿಗ ಗಂಭೀರ ಆರೋಪ

ಶಾಸಕ ರವಿ ಗಣಿಗ
ಬೆಂಗಳೂರು: ʼʼಕಾಂಗ್ರೆಸ್ , ಜೆಡಿಎಸ್ ಮೈತ್ರಿ ಸರಕಾರ ತೆಗೆದ ಆ ತಂಡ ಈಗ ಮತ್ತೆ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನ 4 ಶಾಸಕರಿಗೆ 50 ಕೋಟಿ ರೂ. ಹಣದ ಜೊತೆಗೆ ಮಂತ್ರಿ ಸ್ಥಾನದ ಆಮಿಷ ಒಡ್ಡುತ್ತಿದ್ದಾರೆʼ ಎಂದು ಮಂಡ್ಯ ಕ್ಷೇತ್ರದ ಶಾಸಕ ರವಿ ಗಣಿಗ ಆರೋಪಿಸಿದ್ದಾರೆ.
ಈ ಸಂಬಂಧ ದಾವಣೆಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼ ಬಿ.ಎಸ್. ಯಡಿಯೂರಪ್ಪ ಅವರ ಪಿಎ ಆಗಿದ್ದ ಸಂತೋಷ್ ಹೋಟೆಲ್ ಒಂದರಲ್ಲಿ ನಮ್ಮ ಶಾಸಕರನ್ನು ಭೇಟಿಯಾಗಿದ್ದಾನೆ. ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕರ ಮನೆಗೆ ಹೋಗಿ, ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಅಮಿತ್ ಶಾ ಅವರನ್ನು ಭೇಟಿ ಮಾಡಿಸುತ್ತೇವೆ. 50 ಕೋಟಿ ರೂಪಾಯಿಯ ಜೊತೆಗೆ ಮಂತ್ರಿ ಸ್ಥಾನವನ್ನೂ ಕೊಡುತ್ತೇವ ಎಂದು ಅಮಿಷ ಒಡ್ಡುತ್ತಿದ್ದಾರೆ. ಯಾರ್ಯಾರು ಓಡಾಡುತ್ತಿದ್ದಾರೋ ಅವರ ವಿಡಿಯೋ ನಮ್ಮ ಬಳಿ ಇದೆ. ಕೆಲವೇ ದಿನಗಳಲ್ಲಿ ಆ ವಿಡಿಯೋ ಬಿಡುಗಡೆ ಮಾಡುತ್ತೇವೆʼʼ ಎಂದು ಹೇಳಿದರು.
ʼಹಳೆಯ ಶಾಸಕರು ಮತ್ತು ಹೊಸ ಶಾಸಕರನ್ನು ಕೂಡ ಭೇಟಿಯಾಗಿದ್ದಾರೆ. ಆದರೆ, ಅವರ ಆಮಿಷಕ್ಕೆ ನಮ್ಮ ಯಾವುದೇ ಶಾಸಕರು ಬಲಿಯಾಗಿಲ್ಲ. ಈ ಬಗ್ಗೆ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಈಗಾಗಗಲೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿಯವರ ಗಮನಕ್ಕೂ ತಂದಿದ್ದೇವೆʼʼ ಎಂದರು.
ಇನ್ನು ಯಾವ ಶಾಸಕರನ್ನು ಭೇಟಿಯಾಗಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼʼ ಎಲ್ಲದಕ್ಕೂ ಕಾಲ, ಗಳಿಗೆ ಬೇಕಲ್ವಾ? ಯಾರ್ಯಾರನ್ನು ಭೇಟಿಯಾಗಿದ್ದಾರೆ, ಯಾರ್ಯಾರು ಓಡಾಡುತ್ತಿದ್ದಾರೆ ಎಂಬ ಬಗ್ಗೆ ಶೀಘ್ರದಲ್ಲೇ ವೀಡಿಯೊ ಬಿಡುಗಡೆ ಮಾಡುತ್ತೇವೆʼʼ ಎಂದು ತಿಳಿಸಿದರು.







