ಧಾರ್ಮಿಕ ನಂಬಿಕೆಗಳನ್ನು ಬಿಜೆಪಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ: ಡಿ.ಕೆ. ಶಿವಕುಮಾರ್

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Photo credit: X)
ಬೆಂಗಳೂರು: ಧರ್ಮ ಶ್ರದ್ದೆ, ನಂಬಿಕೆ, ಆಚರಣೆಗಳು ಆಯಾ ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರಗಳಾಗಿದ್ದು, ಇವನ್ನು ಬಿಜೆಪಿ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೂರಿದ್ದಾರೆ.
ಬುಧವಾರ ಖಾಸಗಿ ಹೋಟೆಲ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಕುಂಭಮೇಳದಲ್ಲಿ ಭಾಗವಹಿಸುತ್ತಿರುವ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಟೀಕೆ ಮಾಡಿದ್ದು, ಅವರ ಹೇಳಿಕೆಗೆ ಉತ್ತರಿಸಲು ನಾನು ಇಷ್ಟ ಪಡುವುದಿಲ್ಲ. ಆದರೆ, ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದೆ. ಧರ್ಮ, ಆಚರಣೆ, ನಂಬಿಕೆಗಳು ರಾಜಕೀಯವಾಗಿ ಉಪಯೋಗಿಸಿಕೊಳ್ಳುವ ವಿಚಾರವಲ್ಲ ಎಂದರು.
‘ಜಿಮ್’ ಬಳಿಕ 2ನೇ ವಿಮಾನ ನಿಲ್ದಾಣದ ಬಗ್ಗೆ ಚರ್ಚೆ: ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಎರಡನೇ ವಿಮಾನ ನಿಲ್ದಾಣದ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಅಂತಿಮ ನಿರ್ಧಾರದ ಬಗ್ಗೆ ನನ್ನ ಬಳಿ, ಮುಖ್ಯಮಂತ್ರಿ ಬಳಿ ಚರ್ಚೆ ಮಾಡಿಲ್ಲ. ಪ್ರಾಥಮಿಕ ಸಭೆ ಮಾತ್ರ ಆಗಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ(ಜಿಮ್) ಮುಗಿದ ನಂತರ ನಾವು ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಸಂಪುಟ ಸಭೆಯಲ್ಲಿ ನೀರಿನ ದರ ಏರಿಕೆ ಚರ್ಚೆ: ಬೆಂಗಳೂರು ನಗರದಲ್ಲಿ ನೀರಿನ ದರ ಏರಿಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅದರ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.