ಕಾಂಗ್ರೆಸ್‌ನ ದಲಿತ ನಾಯಕರು ಈಗಲಾದರೂ ದಲಿತರನ್ನು ಸಿಎಂ ಮಾಡಿ ಎಂದು ಕೇಳಿ : ಛಲವಾದಿ ನಾರಾಣಸ್ವಾಮಿ

ಮೈಸೂರು: ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆಗೆ ಸೂಚನೆ ನೀಡಿದೆ ಎಂಬ ಮಾಹಿತಿ ಬರುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ನಾಯಕರು ಈಗಲಾದರೂ ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಕೇಳಿ. ಇಲ್ಲದಿದ್ದರೆ ಕಾಂಗ್ರೆಸ್ ತೊರೆದು ಹೊರ ಬನ್ನಿ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ನಗರದ ಜಲದರ್ಶಿನಿ ಅಥಿತಿಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರದಿಂದ ಕೆಳಗೆ ಇಳಿಯುತ್ತಿದ್ದಾರೆ ಎಂಬುದನ್ನು ಮಾಧ್ಯಮಗಳ ಮೂಲಕ ನಾವು ನೋಡುತ್ತಿದ್ದೇವೆ. ಡಿ.ಕೆ.ಶಿವಕುಮಾರ್ ನನಗೆ ಒಳ್ಳೆಯ ಸ್ನೇಹಿತ ಅವರು ಮುಖ್ಯಮಂತ್ರಿ ಆದರೆ ನನಗೆ ಅಭ್ಯಂತರ ಇಲ್ಲ. ಆದರೆ ಕಳೆದ 80 ವರ್ಷದಿಂದ ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಅಧಿಕಾರ ನಡೆಸಿರುವ ಕಾಂಗ್ರೆಸ್ ನವರು ಈಗಲಾದರೂ ದಲಿತರನ್ನು ಮುಖ್ಯಮಂತ್ರಿ ಮಾಡದೆ ವಂಚನೆ ಮಾಡುತ್ತಿದ್ದಾರಲ್ಲ ಎಂಬ ನೋವು ನನಗಿದೆ. ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳುವ ತಾಕತ್ತು ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ನಾಯಕರಿಗೆ ಇಲ್ಲ. ದಲಿತ ಲೀಡರ್ ಗಳು ಶುಗರ್ ಲೆಸ್, ಸೀಡ್ ಲೆಸ್ ಇದ್ದ ಹಾಗೆ ಆಗಿಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 80 ವರ್ಷಗಳಿಂದ ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ಸೇರಿದ 6 ವರ್ಷದಲ್ಲೇ ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿದೆ ಎಂದು ಹೇಳಿದರು.
ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಇಷ್ಟಪಟ್ಟು ಬಿಟ್ಟುಕೊಡುತ್ತಿಲ್ಲ, ಅವರನ್ನು ಹೆದುರಿಸಿ ಕಿತ್ತುಕೊಳ್ಳಲಾಗುತ್ತಿದೆ. ಸಿಎಂ ಕೊಡಲಿಲ್ಲ ಎಂದರೆ ಡಿ.ಕೆ.ಶಿವಕುಮಾರ್ ಅಷ್ಟು ಸುಲಭವಾಗಿ ಬಿಟ್ಟುಕೊಡುತ್ತಿರಲಿಲ್ಲ. ಈ ಹಿಂದೆ ಅವರು ದೆಹಲಿಯಲ್ಲಿ ಬಿಜೆಪಿ ನಾಯಕರುಗಳನ್ನು ಭೇಟಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಎದುರಿಸುವ ಕೆಲಸ ಮಾಡುತ್ತಿದ್ದರು. ಅವರು ಯಾಕೆ ನಮ್ಮ ಮುಖಂಡರನ್ನು ಭೇಟಿ ಮಾಡುತ್ತಿದ್ದರೊ ಗೊತ್ತಿಲ್ಲ ಎಂದು ಹೇಳಿದರು.
ಒಳಮೀಸಲಾತಿ ಅನ್ಯಾಯಕ್ಕೆ ಮಹದೇವಪ್ಪ ಕಾರಣ :
ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಿ ಪರಿಶಿಷ್ಠ ಜಾತಿ ವರ್ಗಗಳಿಗೆ ಅನ್ಯಾಯ ಮಾಡಿದೆ. ಎ.ಬಿ.ಸಿ. ಎಂದು ಮೂರು ವರ್ಗಗಳನ್ನು ಮಾಡಿ ಅಲೆಮಾರಿ ಸಮುದಾಯವನ್ನು ಬೀದಿಯಲ್ಲೇ ನಿಲ್ಲಿಸಿದ್ದಾರೆ. ಒಳ ಮೀಸಾತಿಯಲ್ಲಿ ರೋಸ್ಟರ್ ಬಿಂದು ಜಾರಿ ಮಾಡಿ ಬಿ, ಸಿ ವರ್ಗಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಇಷ್ಟೆಲ್ಲಾ ಅನಾಹುತ ಆಗಲು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೇ ಕಾರಣ ಎಂದು ಆರೋಪಿಸಿದರು.
ಎಸ್‌ಪಿ, ಟಿಎಸ್ಪಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿವಿಗಳಲ್ಲಿ ಶಿಷ್ಯವೇತನ ಕೊಡದೆ ಅನ್ಯಾಯ ಮಾಡಲಾಗುತ್ತಿದೆ. ಭ್ರಷ್ಟಚಾರ ಸಂಪೂರ್ಣ ಮನೆ ಮಾಡಿದೆ. ಆದರೂ ಕಾಂಗ್ರೆಸ್ ಪಕ್ಷ ದಲಿತರನ್ನು ಉದ್ಧಾರ ಮಾಡುತ್ತದೆ ಎಂಬ ಸುಳ್ಳುಗಳನ್ನು ಹೇಳಿ ದಲಿತರನ್ನು ಧಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.






