ಬಡವರ ಮತಗಳನ್ನು ತೆಗೆಯಲು SIR ಮೂಲಕ ಸಂಚು ಮಾಡಲಾಗಿದೆ : ಡಿ.ಕೆ.ಶಿವಕುಮಾರ್

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (File Photo)
ಬೆಂಗಳೂರು: ಬಡವರ ಮತಗಳನ್ನು ತೆಗೆಯಲು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್ಐಆರ್)ಮೂಲಕ ಸಂಚು ಮಾಡಲಾಗಿದೆ. ನಾವುಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಶುಕ್ರವಾರ ಇಲ್ಲಿನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರು, ಜನಪ್ರತಿನಿಧಿಗಳು, ಬಿಎಲ್ಎಗಳಿಗೆ ಎಸ್ಐಆರ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಈ ಕಾರಣಕ್ಕೆ ನಾವು ಜಾಗೃತಿಗೆ ಮುಂದಾಗಿದ್ದೇವೆ ಎಂದು ಶಿವಕುಮಾರ್ ಹೇಳಿದರು.
ಪ್ರತಿಯೊಬ್ಬರೂ ಸಹ ಅರ್ಜಿ ಸಲ್ಲಿಸಬೇಕಿದೆ. ಇಲ್ಲದಿದ್ದರೆ ನಾಗರಿಕರು ತಮ್ಮ ಮತವನ್ನು ಕಳೆದುಕೊಳ್ಳುತ್ತಾರೆ. ಬೇರೆ ರಾಜ್ಯಗಳಲ್ಲಿ ಇದೇ ರೀತಿ ಆಗಿದ್ದನ್ನು ನೋಡಿದ್ದೇವೆ. ಅದಕ್ಕೆ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ಪ್ರಕರಣ ವಾಪಸ್ ತಪ್ಪೇನಿಲ್ಲ:
ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂಪಡೆಯಲು ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಜೊತೆಗೆ ರೈತರು, ಕನ್ನಡಪರ ಹೋರಾಟಗಾರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ನಿರ್ಧರಿಸಿದ್ದು ಇದರಲ್ಲಿ ತಪ್ಪೇನಿಲ್ಲ ಎಂದು ಶಿವಕುಮಾರ್ ಸಮರ್ಥಿಸಿಕೊಂಡರು.






