ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 28.53 ಲಕ್ಷ ರೂ. ಮೌಲ್ಯದ ಅಮಾನ್ಯ ನೋಟುಗಳು ಪತ್ತೆ!
1000 ಮುಖಬೆಲೆಯ 6.77 ಲಕ್ಷ ರೂ., 500 ಮುಖಬೆಲೆಯ 21.76 ಲಕ್ಷ ರೂ. ಪತ್ತೆ

ಚಾಮರಾಜನಗರ, ಅ.16: ದೇಶದಲ್ಲಿ ನೋಟು ಅಮಾನ್ಯೀಕರಣದ 7 ವರ್ಷಗಳ ಬಳಿಕ ಲಕ್ಷಾಂತರ ರೂಪಾಯಿ ಮೌಲ್ಯದ 500, 1,000 ರೂ. ಮುಖಬೆಲೆಯ ನೋಟುಗಳು ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಕಂಡುಬಂದಿವೆ.
ಹುಂಡಿಯಲ್ಲಿ ಸಂಗ್ರಹವಾಗಿದ್ದ ನೋಟುಗಳನ್ನು ರವಿವಾರ ಎಣಿಕೆ ಮಾಡಲಾಗಿದ್ದು, 1,000 ರೂ. ಮುಖಬೆಲೆಯ ನೋಟುಗಳು 677 (ಮೌಲ್ಯ 6,77,000 ರೂ.), 500 ರೂ. ಮುಖಬೆಲೆಯ ನೋಟುಗಳು 4,353 ( 21,76,500 ರೂ.) ಸಿಕ್ಕಿವೆ. ಅವುಗಳ ಒಟ್ಟು ಮೌಲ್ಯ 28,53,500 ಲಕ್ಷ ರೂ. ಅನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ. 2,000 ರೂ. ಮುಖಬೆಲೆಯ ನೋಟುಗಳೂ 3.56 ಲಕ್ಷದಷ್ಟು ಸಂಗ್ರಹವಾಗಿದ್ದು, ಇವುಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ.
ಆದರೆ, 28 ಲಕ್ಷ ರೂ. ಹುಂಡಿ ಸೇರಿದರೂ ಪ್ರಾಧಿಕಾರಕ್ಕೆ ಪ್ರಯೋಜನಕ್ಕೆ ಬಾರದಂತಾಗಿದೆ.
ಅಮಾನ್ಯಗೊಂಡಿರುವ ನೋಟುಗಳನ್ನು ಭಕ್ತರು ಮಹದೇಶ್ವರ ಬೆಟ್ಟದ ಹುಂಡಿಗೆ ಹಾಕಬಾರದೆಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಅಭಿವೃದ್ದಿ ಪ್ರಾಧಿಕಾರ ಕಾರ್ಯದರ್ಶಿ ಸರಸ್ವತಿ ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ 2.38 ಕೋಟಿ ರೂ. ಸಂಗ್ರಹವಾಗಿತ್ತು.





