ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಇಲಾಖೆ ನೋಡಿಕೊಳ್ಳಲಿ : ಡಿಸಿಎಂ ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು : ಕೇಂದ್ರ ಸರಕಾರದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಇಲಾಖೆಯ ಕೆಲಸವನ್ನು ಮೊದಲು ನೋಡಿಕೊಳ್ಳಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ವಾಹನ ದಟ್ಟಣೆಗೆ ಟನೆಲ್ ರಸ್ತೆ ಪರಿಹಾರವಲ್ಲ ಎಂದಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆಗೆ ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರ ದಟ್ಟಣೆಗೆ ಟನೆಲ್ ರಸ್ತೆ ಪರಿಹಾರವಲ್ಲ ಎಂದಾದರೆ ಮಹಾರಾಷ್ಟ್ರದಲ್ಲಿ ಯಾಕೆ ಟನಲ್ ರಸ್ತೆ ಮಾಡಿಸುತ್ತಿದ್ದಾರೆ?. ಅಲ್ಲದೆ, ಸಚಿವರೂ ಇದಕ್ಕೂ ಏನು ಸಂಬಂಧ? ಅವರ ಇಲಾಖೆ ಕೆಲಸ ಅವರು ಮಾಡಲಿ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಕಾಮಗಾರಿ ಮುಗಿದ ನಂತರವೂ ಗುಣಮಟ್ಟ ಪರಿಶೀಲನೆ ಮಾಡಲಾಗುವುದು. ವೈಟ್ ಟಾಪಿಂಗ್ ಸಂಬಂಧಿಸಿದಂತೆ ಎಲ್ಲ ಕಡೆಗಳಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ. ಒಂದು ಕಡೆ ನನಗೆ ಸ್ವಲ್ಪ ವ್ಯತ್ಯಾಸ ಕಂಡುಬಂದಿದೆ. ತಾಂತ್ರಿಕ ತಂಡವನ್ನು ಅಲ್ಲಿಗೆ ಕಳುಹಿಸಿ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇವೆ ಎಂದು ಅವರು ಹೇಳಿದರು.





