ಮುಂದಿನ ಚುನಾವಣೆಗೆ ಸಾಮೂಹಿಕ ನಾಯಕತ್ವದಲ್ಲಿ ಮುಂದೆ ಸಾಗುತ್ತೇವೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಮುಂದಿನ ಚುನಾವಣೆ ಸೇರಿದಂತೆ ಪಕ್ಷ ವ್ಯಾಪ್ತಿಯ ಎಲ್ಲ ಪ್ರಕ್ರಿಯೆಗಳು ಸಾಮೂಹಿಕ ನಾಯಕತ್ವದಲ್ಲಿಯೇ ಮುಂದೆ ಸಾಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬುಧವಾರ ಇಲ್ಲಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ನನ್ನನ್ನು 90ರ ದಶಕದಿಂದಲೇ ಮಂತ್ರಿ ಮಾಡಿ ಬೆಳೆಸಿದೆ. ಐದು ವರ್ಷ ನನ್ನನ್ನು ಪಕ್ಷ ಅಧ್ಯಕ್ಷನನ್ನಾಗಿ ಮಾಡಿ, ಈಗ ಡಿಸಿಎಂ ಹುದ್ದೆ ನೀಡಿದೆ. ಇಷ್ಟಾದ ಮೇಲೆ ನಾನು ನನ್ನ ಮುಖ ತೋರಿಸಿ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡದಿದ್ದರೆ ನನ್ನ ನಾಯಕತ್ವ ನೀಡದಿದ್ದರೆ ಹೇಗೆ? ನಾನು ಮನೆಯಲ್ಲಿ ಕೂರಲು ಕಾಂಗ್ರೆಸ್ ಪಕ್ಷ ನನಗೆ ಇಷ್ಟು ಶಕ್ತಿ ನೀಡಿದೆಯೇ? ಎಂದು ಪ್ರಶ್ನಿಸಿದರು.
ನಾನು ಯಾವುದೇ ಹುದ್ದೆಯಲ್ಲಿದ್ದರೂ ನಾನು ಪಕ್ಷ ಮುನ್ನಡೆಸಬೇಕು. ಕೇರಳ, ತಮಿಳುನಾಡು, ತೆಲಂಗಾಣ, ಹಿಮಾಚಲ ಪ್ರದೇಶಕ್ಕೆ ನನ್ನನ್ನು ಕರೆಯುತ್ತಾರೆ. 2013ರಲ್ಲಿ ನಾನು ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೆ, ಕಳೆದ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷನಾಗಿದ್ದೆ. ಈಗ ಡಿಸಿಎಂ ಆಗಿದ್ದೇನೆ. ನನಗಿರುವ ಸಾಮರ್ಥ್ಯ, ಅನುಭವ ಬಳಸಿಕೊಳ್ಳಬೇಕು. ಸಿದ್ದರಾಮಯ್ಯ ಅವರು ಕೂಡ ಪಕ್ಷವನ್ನು ಮುನ್ನಡೆಸಲಿದ್ದಾರೆ. ಅವರು ಎರಡು ಅವಧಿಗೆ ವಿರೋಧ ಪಕ್ಷದ ನಾಯಕರಾಗಿ, ಎರಡು ಅವಧಿಗೆ ಸಿಎಂ ಆಗಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ನಾವು ಮುಂದೆ ಸಾಗುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆವರೆಗೂ ಸಿಎಂ ಆಗಿ ಮುಂದುವರೆಯುತ್ತಾರೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದೆ. ನಾನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷನಾಗಿದ್ದು, ನಾನು ಪಕ್ಷದ ತೀರ್ಮಾನವನ್ನು ಗೌರವಿಸುತ್ತೇವೆ. ಪಕ್ಷದಲ್ಲಿ ಕೆಲವರು ಒಬ್ಬರ ಪರವಾಗಿ ಹೇಳಿಕೆ ನೀಡುತ್ತಿರುವ ಕುರಿತು ಎಐಸಿಸಿ ನಾಯಕರು ಉತ್ತರ ನೀಡುತ್ತಾರೆ ಎಂದರು.
100 ಕಾಂಗ್ರೆಸ್ ಭವನ: ನೂರು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಎಲ್ಲ ಕ್ಷೇತ್ರಗಳಲ್ಲಿ ತಯಾರಿ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಹೆಸರಲ್ಲಿ ಜಮೀನು ಇದ್ದರೆ ಮಾತ್ರ ಅಲ್ಲಿ ಪಕ್ಷದ ಕಚೇರಿಗೆ ಶಂಕುಸ್ಥಾಪನೆ ಮಾಡಲಾಗುವುದು. ಬೇರೆಯವರ ಹೆಸರಿನಲ್ಲಿದ್ದರೆ ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಶಿವಾಜಿನಗರ, ಯಶವಂತಪುರ ಸೇರಿದಂತೆ ಮೂರು ಕಡೆ ಶಂಕುಸ್ಥಾಪನೆ ನೆರವೇರಲಿದೆ. ರಾಮನಗರದ ಕಚೇರಿಗೆ ನಾನು ನನ್ನ ಸ್ವಂತ ಹಣದಲ್ಲಿ ಖರೀದಿ ಮಾಡಿ ಪಕ್ಷದ ಹೆಸರಿನಲ್ಲಿ ನೋಂದಣಿ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.







