ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಪ್ರಕರಣಗಳ ತಡೆಗೆ ತಂಡ ರಚನೆ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ
ಬೆಂಗಳೂರು, ಆ.26: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಮೂಲಕ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಗಲಭೆಗಳು ಸಂಭವಿಸುತ್ತಿದ್ದು, ಇಂತಹ ಪ್ರಕರಣಗಳನ್ನು ತಡೆಗಟ್ಟಲು ಪ್ರತಿ ಡಿಸಿಪಿಗಳ ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಮಾನಿಟರ್ ಮಾಡಲು ನುರಿತ ತಂಡವನ್ನು ರಚನೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಉಲ್ಲಂಘನಾತ್ಮಕ ಪೋಸ್ಟ್ ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಡಿಸಿಪಿ ಕಚೇರಿ ವ್ಯಾಪ್ತಿಯಲ್ಲಿ ರಚಿಸುವ ತಂಡವು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್, ಕಮೆಂಟ್ಸ್, ಅಶಾಂತಿಯನ್ನು ಉಂಟು ಮಾಡುವಂತಹ ಪ್ರಕರಣಗಳ ಬಗ್ಗೆ ತೀವ್ರ ನಿಗಾ ವಹಿಸಲಿದೆ. ಇದಿಷ್ಟೇ ಅಲ್ಲದೆ ಪೊಲೀಸ್ ಕಮೀಷನರ್ ಕಚೇರಿಯಲ್ಲೂ ಪರಿಣಿತರ ದೊಡ್ಡ ತಂಡವನ್ನು ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸುಳ್ಳು ಸುದ್ದಿಗಳು, ಫೇಕ್ ಪೋಸ್ಟ್ ವೈರಲ್ ಆಗುತ್ತಿದ್ದಲ್ಲಿ ಅದರ ನಿಜಾಂಶವನ್ನು ಜನರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇವೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಪ್ಪಿತಸ್ಥರನ್ನು ಪತ್ತೆಹಚ್ಚಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ದಯಾನಂದ್ ತಿಳಿಸಿದ್ದಾರೆ.
ತಾಂತ್ರಿಕ ಪರಿಣಿತಿ ಇರುವ ಸಿಬ್ಬಂದಿಯನ್ನು ಈ ಕೆಲಸಕ್ಕೆ ನೇಮಕ ಮಾಡಲಾಗಿದ್ದು, ವಿಶೇಷ ತರಬೇತಿ ಕೊಡಲಾಗಿದೆ. ನಕಲಿ ಖಾತೆಗಳನ್ನೂ ಪತ್ತೆ ಹಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬಿ.ದಯಾನಂದ್ ಹೇಳಿದ್ದಾರೆ.