ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ಕಾಂಗ್ರೆಸ್ಗೆ ಅನಿವಾರ್ಯ : ಜಿ.ಸಿ.ಚಂದ್ರಶೇಖರ್

ಜಿ.ಸಿ.ಚಂದ್ರಶೇಖರ್
ಬೆಂಗಳೂರು : ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ಕಾಂಗ್ರೆಸ್ಗೆ ಅನಿವಾರ್ಯ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇದೇ ಮುಂದುವರಿಯುತ್ತದೆ ಎಂದು ರಾಜ್ಯಸಭಾ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ತಿಳಿಸಿದ್ದಾರೆ.
ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರೋ ಹೇಳಿಕೆ ಕೊಟ್ಟ ತಕ್ಷಣ ಇರುವ ವ್ಯವಸ್ಥೆ ಬದಲಾಗುವುದಿಲ್ಲ. ಇಬ್ಬರೂ ನಾಯಕರು ಕಾಂಗ್ರೆಸ್ಗೆ ಅನಿವಾರ್ಯ. ಉಳಿದ ನಾಯಕರಿಗೂ ಕೂಡ ವರ್ಚಸ್ಸಿದೆ. ಇವರೆಲ್ಲ ಮತದಾರರ ಮೇಲೆ ಪ್ರಭಾವ ಬೀರುವಂತ ನಾಯಕರು, ಇವರ ಅನಿವಾರ್ಯತೆ ಕಾಂಗ್ರೆಸ್ಗೆ ಇದೆ ಎಂದರು.
ರಾಜ್ಯದಲ್ಲಿ ಸುಭದ್ರ ಮುಖ್ಯಮಂತ್ರಿ ಇದ್ದಾರೆ. ಐದು ಗ್ಯಾರೆಂಟಿಗಳನ್ನು ಕೊಟ್ಟಿದ್ದೇವೆ. ಪ್ರಬಲ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಇದ್ದಾರೆ. ಕೆಲವರು ಮಂತ್ರಿಗಳಾಗಿರಬಹುದು, ಕೆಲವರು ಅಧಿಕಾರವಿಲ್ಲದೆಯೂ ಪ್ರಬಲರಿದ್ದಾರೆ. ಎಲ್ಲರ ಅಭಿಪ್ರಾಯವೂ ಮುಖ್ಯವಾಗುತ್ತದೆ. ಈಗ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಬರುತ್ತಿದೆ ಇದರ ಕಡೆ ಎಲ್ಲರೂ ಗಮನಹರಿಸಬೇಕು ಎಂದು ಜಿ.ಸಿ.ಚಂದ್ರಶೇಖರ ಹೇಳಿದರು.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಾವುದೇ ಪರಿಸ್ಥಿತಿಯಲ್ಲೂ ದುರ್ಬಲವಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಹಳ ಸಾಮರ್ಥ್ಯ ಇರುವ ಮನುಷ್ಯ. ಪಕ್ಷದ ಚೌಕಟ್ಟಿನಲ್ಲಿ ನಾಯಕರು ಮಾತಾಡುವುದು ಒಳ್ಳೆಯದು ಎಂದು ಜಿ.ಸಿ.ಚಂದ್ರಶೇಖರ ತಿಳಿಸಿದರು.
ಪಕ್ಷದ ಕೆಲ ಹಿರಿಯ ಸಚಿವರು ಬಹಿರಂಗವಾಗಿ ಮಾತನಾಡುವುದು ಒಳ್ಳೆಯದಲ್ಲ. ಹೀಗೆ ಮಾತನಾಡುವುದು ಪಕ್ಷಕ್ಕೂ ಒಳ್ಳೆಯದಲ್ಲ. ಪಕ್ಷದ ಮೇಲೆ ಹೇಗೆ ಇಂಪ್ಯಾಕ್ಟ್ ಆಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳದೇ ಮಾತನಾಡಿದರೆ ಹೇಗೆ? ಎಂದು ಪರೋಕ್ಷವಾಗಿ ಕೆ.ಎನ್.ರಾಜಣ್ಣಗೆ ಕಿವಿಮಾತು ಹೇಳಿದರು.
ದಲಿತ ಸಮಾವೇಶಕ್ಕೆ ಅಡ್ಡಿಪಡಿಸಿದ್ದೇ ಇಷ್ಟಕ್ಕೆಲ್ಲ ಕಾರಣ ಆಗುತ್ತಿದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಸಮಾವೇಶಗಳು ಪಕ್ಷದ ಚೌಕಟ್ಟಿನಲ್ಲೇ ನಡೆದಿವೆ. ಅದರ ಹೊರತಾಗಿ ನಡೆಯುವುದು ಸರಿಯಲ್ಲ. ಎಲ್ಲ ವರ್ಗಗಳ ಸಮ್ಮಿಲನ ಕಾಂಗ್ರೆಸ್. ನಾವು ಗ್ಯಾರೆಂಟಿ ಕೊಟ್ಟಿದ್ದೇವೆ. ಅದು ಜನರಿಗೆ ಉಪಯೋಗವಾಗಿದೆ. ಯಾವುದನ್ನು ನಡೆಸಿದರೂ ಪಕ್ಷದಲ್ಲೇ ನಡೆಸಬೇಕು, ಬೇರೆಡೆ ನಡೆಸುವುದು ಸರಿಯಲ್ಲ ಎಂದು ಜಿ.ಸಿ.ಚಂದ್ರಶೇಖರ ತಿಳಿಸಿದರು.







