ಜವಾಬ್ದಾರಿಯುತ ಸರಕಾರವಾಗಿ SIR ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ: ಡಿ.ಕೆ. ಶಿವಕುಮಾರ್

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (File Photo)
ಬೆಂಗಳೂರು: ಜವಾಬ್ದಾರಿಯುತ ಸರಕಾರವಾಗಿ ನಾವು ಜನರಿಗೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಬಗ್ಗೆ ಜಾಗೃತಿ ಮೂಡಿಸಬೇಕು. ನಾವು ಆ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಜನರ ಹಕ್ಕು ಉಳಿಸಲು ಇಂದು ಪಕ್ಷದ ಮುಖಂಡರ ಸಭೆ ಕರೆಯಲಾಗಿದೆ. ಚುನಾವಣಾ ಆಯೋಗ ನೀಡುವ ಅರ್ಜಿ ತುಂಬಿಸಿ ದಾಖಲೆ ಸಮೇತ ವಾಪಸ್ ನೀಡಿದವರ ಮತ ಮಾತ್ರ ಉಳಿಯುತ್ತದೆ, ಅರ್ಜಿ ವಾಪಸ್ ನೀಡದವರ ಮತದಾನದ ಹಕ್ಕು ನಷ್ಟವಾಗಲಿದೆ. ಈ ಬಗ್ಗೆ ಬೂತ್ ಮಟ್ಟದ ಏಜೆಂಟ್(ಬಿಎಲ್ಎ)ಗಳ ಮೂಲಕ ನಾವು ಖಾತರಿಪಡಿಸಬೇಕಾಗಿದೆ ಎಂದರು.
ಎಸ್ಐಆರ್ ನಿಂದ ಈ ದೇಶದಲ್ಲಿ ಸಾಕಷ್ಟು ಅನಾಹುತಗಳು ನಡೆಯುತ್ತಿವೆ. ಅದಕ್ಕೆ ಇದರ ಬಗ್ಗೆ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಬಡ, ಸಾಮಾನ್ಯರಿಗೆ ಎಸ್ಐಆರ್ ಬಗ್ಗೆ ಪರಿಚಯ ಮಾಡಿಕೊಡಬೇಕಿದೆ. ಒಂದೊಂದು ರಾಜ್ಯದಲ್ಲಿ 50, 60 ಹಾಗೂ 90 ಲಕ್ಷದವರೆಗೆ ಮತಗಳನ್ನು ತೆಗೆದುಹಾಕಲಾಗುತ್ತಿದೆ. ಕರ್ನಾಟಕದಲ್ಲೂ ಎಸ್ಐಆರ್ ಪ್ರಾರಂಭವಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮತದಾನದ ಹಕ್ಕನ್ನು ಕಳೆದುಕೊಂಡರೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಗೃಹಲಕ್ಷ್ಮಿ ಯೋಜನೆ ಹಣ, ಪಿಂಚಣಿ, ಮನೆ, ಜಮೀನು ಸೇರಿದಂತೆ ಸರಕಾರದ ಎಲ್ಲ ಯೋಜನೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ದೃಷ್ಟಿಯಿಂದ ಸರಕಾರ ಜನರಿಗೆ ಬೇಕಾದ ದಾಖಲೆಗಳನ್ನು ಒದಗಿಸಿಕೊಡಬೇಕು. ಇದು ಜವಾಬ್ದಾರಿಯುತ ಸರಕಾರದ ಕೆಲಸ. ಕೇರಳದಲ್ಲಿ ಇದೇ ರೀತಿ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಸಮಸ್ಯೆಯಾದರೆ ಜನ ಪ್ರಶ್ನೆ ಮಾಡುವುದು ನಮ್ಮನ್ನೆ: ಮತದಾರರು ಅರ್ಜಿ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಕಾಂಗ್ರೆಸ್, ಬಿಜೆಪಿ, ದಳ ಸೇರಿದಂತೆ ಎಲ್ಲ ಪಕ್ಷಗಳು ಬಿಎಲ್ಎ ಗಳಿಗೆ ತರಬೇತಿ ನೀಡುತ್ತಿವೆ. ನಮ್ಮಿಂದ ಹಾಗೂ ಸರಕಾರದಿಂದ ಏನೂ ತೊಂದರೆಯಾಗಬಾರದು ಎಲ್ಲರಿಗೂ ನ್ಯಾಯ ಒದಗಿಸಿಕೊಡಬೇಕು ಎಂಬುದು ನನ್ನ ಆಶಯ. ಚುನಾವಣೆ ಗೆಲ್ಲುವುದು, ಬಿಡುವುದು ಬೇರೆ ವಿಚಾರ. ಮತದಾನ ಕಳೆದುಕೊಳ್ಳಬೇಡಿ ಎಂದು ನಾವು ಹೇಳಬೇಕು ಎಂದು ಅವರು ನುಡಿದರು.
ಬಡವರ ಉಪಯೋಗಕ್ಕೆ ಜನ ಕಲ್ಯಾಣ ಯೋಜನೆಗಳನ್ನು ನೀಡಲಾಗುತ್ತಿದೆ. ಮತದಾನದ ಹಕ್ಕು ಇಲ್ಲ ಎಂದು ಯೋಜನಾ ಸೌಲಭ್ಯಗಳನ್ನು ನಿರಾಕರಿಸಿದರೆ ಆನಂತರ ಜನರು ನಿಮ್ಮಿಂದಲೆ(ಸರಕಾರ) ಸೌಲಭ್ಯಗಳು ಇಲ್ಲವಾಗಿವೆ ಎನ್ನುತ್ತಾರೆ. ಬಿಜೆಪಿಯವರೆ ಎಸ್ಐಆರ್ ಮಾಡಿರಬಹುದು ಆದರೆ ಜನ ನಮ್ಮನ್ನು ಪ್ರಶ್ನೆ ಮಾಡುತ್ತಾರೆ ಎಂದು ಶಿವಕುಮಾರ್ ಹೇಳಿದರು.
ಎಸ್ಐಆರ್ ಬಗ್ಗೆ ಮನವರಿಕೆ ಮಾಡಬೇಕು: ಹಳ್ಳಿಜನಕ್ಕೆ ಎಸ್ಐಆರ್ ಬಗ್ಗೆ ಏನು ತಿಳಿದಿರುತ್ತದೆ. ನಾವು ಇದನ್ನ ಮನವರಿಕೆ ಮಾಡಿಸಬೇಕು. ಲಕ್ಷಾಂತರ ಜನ ವಲಸೆ ಕಾರ್ಮಿಕರು ಸೇರಿದಂತೆ ಜೀವನೋಪಾಯಕ್ಕೆ ಗೋವಾ ಸೇರಿದಂತೆ ಅನೇಕ ಕಡೆಗೆ ವಲಸೆ ಹೋಗಿರುತ್ತಾರೆ. ಈ ವೇಳೆ ಮನೆಗೆ ಬಂದಾಗ ಯಾರು ಇಲ್ಲದಿದ್ದರೆ ತೊಂದರೆಯಾಗುತ್ತದೆ. ಎಸ್ಐಆರ್ ವೇಳೆ ಎನುಮರೇಷನ್ ಅರ್ಜಿಗೆ ಸಹಿಹಾಕಿಸಿಕೊಳ್ಳುತ್ತಾರೆ. ಮೂರು ಬಾರಿ ಅರ್ಜಿಗೆ ಸಹಿ ಮಾಡಬೇಕಾದ ಸ್ಥಿತಿಯಿದೆ. ಇದು ಆಗದೇ ಇದ್ದರೆ ಪಟ್ಟಿಯಲ್ಲಿ ಹೆಸರಿಲ್ಲದಂತಾಗುತ್ತದೆ ಎಂದು ಅವರು ಹೇಳಿದರು.
ಸ್ವತಃ ನಾನೇ ಎನುಮರೇಷನ್ ಅರ್ಜಿಗೆ ಸಹಿ ಹಾಕದೇ ಇದ್ದರೇ ನನ್ನ ಮತವೆ ನನಗೆ ಇರುವುದಿಲ್ಲ. ಮಹಾರಾಜನಾದರೂ ಮತ ಇಲ್ಲವಾಗುತ್ತದೆ. ಮುಂದಿನ ಚುನಾವಣೆಗೆ ಮತ ಹಾಕಿ ಎಂದು ಕಳುಹಿಸಿಬಿಡುತ್ತಾರೆ. ಅಮರ್ಥ್ಯ ಸೇನ್ ಅವರದ್ದೇ ಮತವಿಲ್ಲದಾಗಿದೆ. ಈ ರೀತಿ ಆಗುವುದು ಬೇಡ. ಅವರವರ ಮತವನ್ನು ಉಳಿಸಿಕೊಳ್ಳಬೇಕು ಎಂದು ಶಿವಕುಮಾರ್ ತಿಳಿಸಿದರು.
ಪಕ್ಷವಿದ್ದರೆ ಸ್ಥಾನಮಾನ: ಸಂಪುಟ ವಿಸ್ತರಣೆ ಬಗೆಗಿನ ಗೊಂದಲ ಬಗೆಹರಿಯಲಿದೆಯೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಗೊಂದಲವೂ ಇಲ್ಲ. ನೀನು ಇದ್ದರೆ ಮಾತ್ರ ನಿನ್ನ ಪಕ್ಷ. ಮೊದಲು ನೀನು ಹಾಗೂ ಪಕ್ಷ ಇರಬೇಕು, ಅನಂತರ ಮಿಕ್ಕಿದ್ದೆಲ್ಲ ಸ್ಥಾನಮಾನ ಎಂದು ಅವರು ಹೇಳಿದರು.






