ಆಸ್ತಿ ನೋಂದಣಿಯ 'ಕಾವೇರಿ ವೆಬ್ಸೈಟ್' ಸರ್ವರ್ ಮತ್ತೆ ಡೌನ್; ಸಂಕಷ್ಟಕ್ಕೀಡಾದ ಸಾರ್ವಜನಿಕರು

PC: screengrab/ kaveri.karnataka.gov.in
ಬೆಂಗಳೂರು: ಕರ್ನಾಟಕದಾದ್ಯಂತ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದಕ್ಕಾಗಿ ಸ್ಥಾಪಿಸಲಾದ ಕಾವೇರಿ 2.0 ವೆಬ್ಸೈಟ್ನ ಸರ್ವರ್ ಡೌನ್ ಆಗಿದೆ ಎನ್ನಲಾಗುತ್ತಿದ್ದು, 256 ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿಯ ಮೇಲೆ ಪರಿಣಾಮ ಬೀರಿರುವ ಬಗ್ಗೆ ವರದಿಯಾಗಿದೆ.
ರಾಜ್ಯದಲ್ಲಿ ಆಸ್ತಿಗಳ ನೋಂದಣಿ ಆನ್ಲೈನ್ನಲ್ಲಿ ಮಾತ್ರ ಮಾಡಲಾಗುತ್ತದೆ. ಉಪ ನೋಂದಣಿ ಕಚೇರಿಯಲ್ಲಿನ ಕಾವೇರಿ 2.0 ಅಪ್ ಗ್ರೇಡ್ ಮಾಡಿದ ಬಳಿಕ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಬಹುತೇಕ ಸೇವೆಗಳನ್ನು ಆನ್ಲೈನ್ ಮಾಡಿದೆ. ಇದರಿಂದಾಗಿ ಕಾವೇರಿ ವೆಬ್ಸೈಟ್ನಲ್ಲಿ ಸಾರ್ವಜನಿಕರು ಲಾಗಿನ್ ಆಗಿ ದಸ್ತಾವೇಜುಗಳ ನೋಂದಣಿ ಸೇವೆ ಪಡೆಯಬಹುದಾಗಿತ್ತು. ಇದೀಗ ಹಲವು ದಿನಗಳಿಂದ ಸರ್ವರ್ ಸಮಸ್ಯೆ ಎದುರಾಗಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜನರು ಪರದಾಡುವಂತಾಗಿದೆ.
“ಕಾವೇರಿ ವೆಬ್ಸೈಟ್ನಲ್ಲಿ ಲಾಗಿನ್ ಆಗಲು ಒಟಿಪಿ ಬರುತ್ತಿಲ್ಲ. ಒಟಿಪಿ ಬಂದರೂ ದಾಖಲೆಗಳನ್ನು ಅಪ್ಲೋಡ್ ಮಾಡಲು ಭಾರೀ ಸಮಯ ತೆಗೆದುಕೊಳ್ಳುತ್ತಿದೆ. ಆಸ್ತಿಯ ಮಾರ್ಗಸೂಚಿ ದರ ತೋರಿಸದ ಪರಿಣಾಮ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸುವುದು ಕೂಡ ವಿಳಂಬವಾಗುತ್ತಿದೆ. ಇದಾದ ನಂತರ ಆನ್ಲೈನ್ನಲ್ಲಿ ಶುಲ್ಕ ಪಾವತಿಸಲು ಸರ್ವರ್ ಸಮಸ್ಯೆ ಎದುರಾಗಿದೆ. ಒಂದು ಸಲ ಶುಲ್ಕ ಪಾವತಿಸುವಲ್ಲಿ ತೊಂದರೆಯಾದರೆ ಮರು ಪ್ರಯತ್ನಕ್ಕೆ ಎರಡು ಗಂಟೆ ಸಮಯ ಕೇಳುತ್ತದೆ” ಎಂಬ ದೂರುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿವೆ.
ರಿಜಿಸ್ಟ್ರೇಷನ್ ಸಲುವಾಗಿ ಕೆಲಸ ಕಾರ್ಯಗಳಿಗೆ ರಜೆ ಇಡೀ ದಿನ ಕಾದು ಕಾದು ಹೈರಾಣಾಗಿದ್ದೇವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.
ಕಳೆದ ವರ್ಷವಿಡೀ ಕಾವೇರಿ 2.0 ಸಾಫ್ಟ್ವೇರ್ನಲ್ಲಿ ಹಲವಾರು ಬಾರಿ ದೋಷಗಳು ಕಂಡುಬಂದಿದ್ದವು. ಇದೀಗ ಇತ್ತೀಚೆಗೆ ಕಾಣಿಸಿಕೊಂಡ ಸರ್ವರ್ ಸಮಸ್ಯೆಯನ್ನು ಸರಿಪಡಿಸಲು ಎಂಜಿನಿಯರ್ಗಳು ಸೋಮವಾರ ತಡರಾತ್ರಿಯವರೆಗೆ ಕೆಲಸ ಮಾಡಿರುವುದಾಗಿ ತಿಳಿದುಬಂದಿದೆ.
ರಾಜ್ಯದಲ್ಲಿ ಪ್ರತಿದಿನ ಸರಾಸರಿ 7ರಿಂದ 8 ಸಾವಿರ ದಸ್ತಾವೇಜುಗಳು ನೋಂದಣಿ ಆಗುತ್ತಿತ್ತು. ಅದೇ ರೀತಿ ನಿತ್ಯ ಕನಿಷ್ಠ 40 ಕೋಟಿ ರೂ.ನಿಂದ ಗರಿಷ್ಠ 90 ಕೋಟಿ ರೂ. ವರೆಗೂ ರಾಜಸ್ವ ಸಂಗ್ರಹ ಆಗುತ್ತಿತ್ತು. ಆದರೀಗ ಕಾವೇರಿ 2.0 ತಾಂತ್ರಿಕ ದೋಷದಿಂದ ಸಂಪೂರ್ಣ ಇಳಿಕೆಯಾಗಿದೆ. ಕಳೆದ ಶನಿವಾರದಿಂದ ಈವರೆಗೆ ಬೆರಳೆಣಿಕೆಯಷ್ಟು ಮಾತ್ರ ಅರ್ಜಿಗಳು ಪೂರ್ಣಗೊಂಡಿರುವುದಾಗಿ ತಿಳಿದುಬಂದಿದೆ.