ʼಖಾತೆʼ ವಿಚಾರ : ವರಿಷ್ಠರ ಭೇಟಿಗಾಗಿ ದಿಲ್ಲಿಗೆ ತೆರಳಿದ ಸಚಿವ ಕೃಷ್ಣಬೈರೇಗೌಡ

ಬೆಂಗಳೂರು : ಕಾಂಗ್ರೆಸ್ ಸರಕಾರದಲ್ಲಿ ಖಾತೆ ಹಂಚಿಕೆ ಸಂಬಂಧ ಹಿರಿಯ ನಾಯಕರಲ್ಲಿದ್ದ ಅಸಮಾಧಾನ ಶಮನ ಬೆನ್ನಲ್ಲೇ, ಇದೀಗ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಕೂಡ ತಮ್ಮ ಖಾತೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
ಕೃಷ್ಣ ಬೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಸ್ವೀಕರಿಸಲು ನಿರಾಕರಿಸಿದ್ದು, ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಮತ್ತು ಬಿಎಂಆರ್‌ಡಿಎ (ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಗಳನ್ನು ತನ್ನ ಖಾತೆಗೆ ಸೇರಿಸಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸುರ್ಜೇವಾಲ ಅವರ ಗಮನಕ್ಕೂ ಈ ವಿಚಾರ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೃಷ್ಣ ಭೈರೇಗೌಡ ಅವರು ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲಿ ಹೈಕಮಾಂಡ್ ನಾಯಕರಾದ ಕೆ.ಸಿ. ವೇಣುಗೋಪಾಲ್, ಖರ್ಗೆ ಮತ್ತು ಸುರ್ಜೇವಾಲ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅವರು ಅಧಿಕಾರ ಸ್ವೀಕರಿಸಿದ ಬಳಿಕ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಆದರೆ ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ ಮತ್ತು ಕೆ.ಎಚ್.ಮುನಿಯಪ್ಪ ಅವರು ತಮಗೆ ನೀಡಿರುವ ಖಾತೆ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ರಾಹುಲ್ ಗಾಂಧಿ ಸಹಿತ ಹೈಕಮಾಂಡ್ ನಾಯಕರು ಹಿರಿಯ ನಾಯಕರ ಮನವೊಲಿಸಿ ಉಂಟಾಗಿದ್ದ ಅಸಮಾಧಾನವನ್ನು ಶಮನಗೊಳಿಸಿದ್ದರು.






