ವಿಧಾನ ಪರಿಷತ್ ಚುನಾವಣೆ: 8 ಮಂದಿ ಅಭ್ಯರ್ಥಿಗಳ ನಾಮಪತ್ರ ಮಾನ್ಯ; ‘ಅಡ್ಡ ಮತದಾನದ ಭೀತಿ’

ಸಾಂದರ್ಭಿಕ ಚಿತ್ರ
ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ ಸಂಬಂಧ ಎಂಟು ಅಭ್ಯರ್ಥಿಗಳ ನಾಮಪತ್ರ ಅಧಿಕೃತವಾಗಿ ಮಾನ್ಯಗೊಂಡಿದ್ದು, ಇದೀಗ ಆಡಳಿತರೂಢ ಕಾಂಗ್ರೆಸ್ ಪಕ್ಷವು ಸೇರಿದಂತೆ ಬಿಜೆಪಿ-ಜೆಡಿಎಸ್ ಪಕ್ಷಗಳಿಗೂ ಅಡ್ಡ ಮತದಾನದ ಭೀತಿ ಶುರುವಾಗಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ್, ಶಿವಣ್ಣ ಬಿ.ಎಸ್.(ಶಿವಣ್ಣ ಮಳವಳ್ಳಿ), ತಿಪ್ಪಣ್ಣಪ್ಪ ಕಮಕನೂರ, ಪಿ.ವಿ.ಮೋಹನ್, ವಿನಯ್ ಕಾರ್ತಿಕ್ ಪ್ರಕಾಶ್, ಬಿಜೆಪಿಯ ರಘು ಆರ್., ಲಿಂಗರಾಜ ಪಾಟೀಲ್, ಜೆಡಿಎಸ್ನ ಗೋವಿಂದರಾಜು ಅವರು ಸಲ್ಲಿಸಿರುವ ನಾಮಪತ್ರಗಳು ಮಾನ್ಯಗೊಂಡಿವೆ ಎಂದು ಮಂಗಳವಾರ ವಿಧಾನಸಭೆಯ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಪ್ರಕಟಿಸಿದ್ದಾರೆ.
ಏಳನೆ ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಅಗತ್ಯವಿರುವ ಸಂಖ್ಯಾಬಲದ ಕೊರತೆ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಇತರ ಪಕ್ಷದ ಶಾಸಕರ ಬೆಂಬಲ ಪಡೆಯಲು ಪ್ರಯತ್ನಿಸಿದ್ದಾರೆ. ಶಾಸಕರಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆ ನಡೆಯುವುದರಿಂದ, ಪ್ರತಿ ಮತವೂ ಅತ್ಯಂತ ನಿರ್ಣಾಯಕವಾಗಿರುತ್ತದೆ.
ಹೀಗಾಗಿ ತಮ್ಮ ಶಾಸಕರನ್ನು ಒಂದೆಡೆ ಸೇರಿಸಿ, ಮತದಾನದ ವಿಧಾನದ ಬಗ್ಗೆ ಜಾಗೃತಿ ವಹಿಸುವ ಸಾಧ್ಯತೆಯೂ ಇದೆ. ಪ್ರಮುಖವಾಗಿ ಈ ಚುನಾವಣೆಯು ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಮತ್ತು ವಿರೋಧ ಪಕ್ಷಗಳ ಒಗ್ಗಟ್ಟಿನ ಪರೀಕ್ಷೆಯಾಗಿದೆ. ಇದು ಕೇವಲ ಸಂಖ್ಯೆಗಳ ಆಟವಾಗಿ ಉಳಿಯದೆ, ಆಯಾ ಪಕ್ಷಗಳ ಆಂತರಿಕ ಒಗ್ಗಟ್ಟು ಮತ್ತು ರಾಜಕೀಯ ಚಾಣಾಕ್ಷತೆಯ ಪ್ರಶ್ನೆಯೂ ಅಡಗಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ರಹಸ್ಯ ಮತದಾನದ ಪದ್ಧತಿಯಾಗಿರುವುದರಿಂದ, ಪಕ್ಷದ ಆಂತರಿಕ ಭಿನ್ನಮತ ಅಥವಾ ಅಡ್ಡ ಮತದಾನದ ಭೀತಿಯನ್ನು ಎಲ್ಲ ಪಕ್ಷಗಳೂ ಎದುರಿಸುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೆ ಈ ಸ್ಥಾನವು ಪ್ರತಿಷ್ಠೆಯ ವಿಷಯವಾಗಿದೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಚುನಾವಣೆ ಅನಿವಾರ್ಯವಾಗಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಗೆಲುವಿಗಾಗಿ ‘ರೆಸಾರ್ಟ್ ರಾಜಕೀಯ’ ಅಥವಾ ಶಾಸಕರನ್ನು ಒಗ್ಗೂಡಿಸುವ ತಂತ್ರಗಳನ್ನು ಬಳಸುತ್ತಿದ್ದರೆ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ತಂತ್ರಗಳನ್ನು ಹೆಣೆಯುತ್ತಿವೆ.
ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಸಂಖ್ಯಾಬಲವಿಲ್ಲದ ಅಥವಾ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗ, ಗೆಲ್ಲಲು ಅಗತ್ಯವಿರುವ ಮತಗಳನ್ನು ಪಡೆಯಲು ಇತರ ಪಕ್ಷಗಳ ಶಾಸಕರ ಬೆಂಬಲ ಅನಿವಾರ್ಯವಾಗುತ್ತದೆ. ಇದುವೇ ‘ಅಡ್ಡ ಮತದಾನ’ದ ಚರ್ಚೆಗೆ ದಾರಿ ಮಾಡಿಕೊಡುತ್ತದೆ. ಕಾಂಗ್ರೆಸ್ ಈಗಾಗಲೇ 4 ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಕಾಂಗ್ರೆಸ್, 5ನೆ ಸ್ಥಾನವನ್ನು ಗೆಲ್ಲಲು ಮೈತ್ರಿಕೂಟ ಮತ್ತು ಇತರ ಪಕ್ಷಗಳ ಅಸಮಾಧಾನಿತ ಶಾಸಕರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಬಹುದು. ವಿಧಾನ ಪರಿತ್ನ ಸಭಾಪತಿ, ಉಪಸಭಾಪತಿ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಪ್ರತಿಷ್ಠೆಯ ವಿಷಯವಾಗಿದೆ.
224 ಸದಸ್ಯ ಬಲದ ವಿಧಾನಸಭೆಯಲ್ಲಿ ಶಾಸಕರ ಅನರ್ಹತೆ ಮತ್ತು ನಿಧನದ ಕಾರಣ, ಪ್ರಸ್ತುತ 222 ಮಂದಿ ಶಾಸಕರು ಮತ ಚಲಾಯಿಸಲಿದ್ದಾರೆ. ಒಬ್ಬ ಅಭ್ಯರ್ಥಿ ಗೆಲ್ಲಲು 28 ಪ್ರಥಮ ಪ್ರಾಶಸ್ಯ್ತದ ಮತಗಳು ಬೇಕಾಗಿದೆ. ಕಾಂಗ್ರೆಸ್ ಪಕ್ಷವು 135 ಶಾಸಕರನ್ನು ಹೊಂದಿದ್ದು, ಪಕ್ಷೇತರ ಶಾಸಕರು ಮತ್ತು ಇತರರ ಬೆಂಬಲದೊಂದಿಗೆ 140 ಮತಗಳನ್ನು ತಲುಪುವ ಸಾಧ್ಯತೆ ಇದೆ.
ಬಿಜೆಪಿ 62 ಮಂದಿ ಶಾಸಕರ ಸಂಖ್ಯಾಬಲ ಹೊಂದಿದ್ದು, ಇಬ್ಬರು ಅಭ್ಯರ್ಥಿಗಳ ಗೆಲುವಿಗೆ 28 ಪ್ರಥಮ ಪ್ರಾಶಸ್ಯ್ತದ ಮತಗಳನ್ನು ಹಂಚಿಕೆ ಮಾಡಿದರೆ, ಇನ್ನೂ 6 ಮತಗಳು ಉಳಿಯಲಿವೆ. ಇನ್ನೊಂದೆಡೆ ಜೆಡಿಎಸ್ ತನ್ನ ಪಕ್ಷದ 18 ಮತಗಳೊಂದಿಗೆ ಬಿಜೆಪಿಯ ಹೆಚ್ಚುವರಿ 6 ಮತಗಳನ್ನು ಪಡೆದರೆ ಒಟ್ಟು 24 ಮತಗಳು ಲಭ್ಯವಾಗುತ್ತವೆ. ಇದರೊಂದಿಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ತಮ್ಮ ಬಲವನ್ನು ಕ್ರೋಢೀಕರಿಸಲು ಪ್ರಯತ್ನ ನಡೆಸಿದೆ.
ಯಾವಾಗ ಮತದಾನ: ಜೂನ್ 18ರ ಬೆಳಗ್ಗೆ 8ರಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಮತ ಎಣಿಕೆ ಸಂಜೆ 5 ಗಂಟೆಗೆ ಪ್ರಾರಂಭವಾಗಿ ಅಂದೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ.
ಕಾಂಗ್ರೆಸ್-135, ಬಿಜೆಪಿ-62, ಜೆಡಿಎಸ್-18, ಬಿಜೆಪಿ ಉಚ್ಚಾಟಿತ-3, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ-1, ಸರ್ವೋದಯ ಕರ್ನಾಟಕ-1, ಪಕ್ಷೇತರ ಸದಸ್ಯರು-2, ಖಾಲಿ(ವಿನಯ್ ಕುಲಕಣಿ, ಡಿ.ಸುಧಾಕರ್)-2 ಸ್ಥಾನಗಳು.






