ಮಂಡ್ಯ: ಸಂಘ ಪರಿವಾರದ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ; ಎಂದಿನಂತಿದ್ದ ವಾಣಿಜ್ಯ ಚಟುವಟಿಕೆ, ವಾಹನ ಸಂಚಾರ

ಮಂಡ್ಯ, ಫೆ.9: ಮಂಡ್ಯ ತಾಲೂಕಿನ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಸಂಬಂಧ ಸಂಘ ಪರಿವಾರದ ಸಂಘಟನೆಗಳು ಕರೆ ನೀಡಿದ್ದ ಇಂದಿನ ಬಂದ್ ಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆರಗೋಡು ಧ್ವಜ ವಿವಾದಕ್ಕೆ ಸಂಬಂಧಿಸಿದ ವಿಚಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮಂಡ್ಯ ನಗರದ ಜನತೆ ಹಾಗೂ ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳು ಎಂದಿನಂತೆ ಅಂಗಡಿಗಳನ್ನು ತೆರೆದು ವಾಣಿಜ್ಯ ಚಟುವಟಿಕೆಗಳನ್ನು ನಡೆಸಿದರು. ಶಾಲಾ ಕಾಲೇಜುಗಳು, ಚಿತ್ರಮಂದಿರಗಳು, ದಿನಸಿ ಅಂಗಡಿಗಳು ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆಗಳು ಎಂದಿನಂತೆ ಯಾವುದೇ ಅಡೆತಡೆಗಳಿಲ್ಲದೇ ಕಾರ್ಯ ನಿರ್ವಹಿಸಿದವು.
ತಲೆಕೆಡಿಸಿಕೊಳ್ಳದ ಜನಸಾಮಾನ್ಯರು
ಮಂಡ್ಯ ನಗರದ ಜನತೆ ಹಾಗೂ ಗ್ರಾಹಕರು ಮಂಡ್ಯ ಬಂದ್ ಕರೆಗೆ ತಲೆ ಕೆಡಿಸಿಕೊಂಡಂತೆ ಕಂಡು ಬರಲಿಲ್ಲ, ಎಂದಿನಂತೆ ತಮ್ಮ ಚಟುವಟಿಕೆ ಮುಂದುವರಿಸಿದರು.
ಬಿಜೆಪಿ ಮುಖಂಡ ಅಶೋಕ್ ಜಯರಾಂ ಗುರುವಾರ ಸುದ್ದಿಗೋಷ್ಠಿ ನಡೆಸಿ, ಜಿಲ್ಲಾಧಿಕಾರಿ ಮನವಿ ಮೇರೆಗೆ ನಾವು ಬಂದ್ ಅನ್ನು ಬೆಂಬಲಿಸುತ್ತಿಲ್ಲ ಎಂದು ಪ್ರಕಟಿಸಿದ್ದರು.
ಬೆಂಬಲ ನೀಡದ ಜಿಲ್ಲಾ ವಾಣಿಜ್ಯ ಮಂಡಳಿ
ಮಂಡ್ಯ ನಗರ ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಕೆ.ಪ್ರಭಾಕರ್ ಕೂಡಾ ತಿಳಿಸಿದ್ದರು.
ಬಂದ್ನಿಂದಾಗಿ ವ್ಯಾಪಾರ-ವಹಿವಾಟಿಗೆ ತೊಂದರೆಯಾಗುವ ಪರಿಣಾಮ ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತದೆ. ಇಂತಹ ಬಂದ್ಗೆ ಹಿಂದೆಯೂ ಬೆಂಬಲ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ ಎಂದಿದ್ದರು.
ಆದರೆ ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಕರೆ ನೀಡಿರುವ ಫೆ.9ರಂದು ಬಂದ್ ಗೆ ಸಹಕರಿಸುವಂತೆ ಹಿಂದು ಸಂಘಟನೆ ಕಾರ್ಯಕರ್ತರು ಮನವಿ ಮಾಡಿದ್ದರು, ವ್ಯಾಪಾರಿಗಳು ಇದಕ್ಕೆ ಕ್ಯಾರೇ ಎನ್ನದೇ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗುವ ಮೂಲಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಮಂಡ್ಯ ನಗರ ಬಂದ್ಗೆ ಸಾರ್ವಜನಿಕರು, ವರ್ತಕರು, ರಸ್ತೆ ಬದಿ ವ್ಯಾಪಾರಿಗಳು, ಹೋಟೆಲ್ ಮಾಲಕರು, ಬೇಕರಿ ಮಾಲಕರು, ಆಟೋ ಚಾಲಕರು ಬೆಂಬಲ ವ್ಯಕ್ತಪಡಿಸದ ಕಾರಣ ಸಂಘ ಪರಿವಾರದ ಬಂದ್ ರ್ಯಾಲಿಗಷ್ಟೇ ಸೀಮಿತವವಾಯಿತು.
ಬಿಗಿ ಪೊಲೀಸ್ ಬಂದೋಬಸ್ತ್
ಸಂಘ ಪರಿವಾರ ಬಂದ್ ಕರೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಮುನ್ನೆಚ್ಚರಿಕೆ ವಹಿಸಿ ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಿತ್ತ. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.







