ಮೈಸೂರ್ ಪಾಕ್ ಗೆ ಈಗ ವಿಶ್ವಮನ್ನಣೆ!
Photo: twitter.com/Healthyeats793
ಮೈಸೂರು: ಪ್ರತಿ ಊರಿಗೂ ವಿಶಿಷ್ಟ ಎನಿಸಿದ ಒಂದಲ್ಲ ಒಂದು ಆಹಾರ ವಿಶೇಷತೆ ಸಾಮಾನ್ಯ. ಧಾರವಾಡದ ಪೇಡಾ, ಬೆಳಗಾಂ ಕುಂದಾ, ಗೋಕಾಕ್ ಕರದಂಡು ಹೀಗೆ ಇನ್ನೂ ಹಲವಾರು ವಿಶೇಷ ತಿಂಡಿ ತಿನಸುಗಳಿಗೆ ಕನ್ನಡನಾಡು ಹೆಸರುವಾಸಿ. ಆದರೆ, ತನ್ನ ಹೆಸರಿನಲ್ಲಿಯೇ ಮೈಸೂರನ್ನು ಪ್ರತಿನಿಧಿಸುವ ಮೈಸೂರ್ ಪಾಕ್ ತನ್ನ ಖ್ಯಾತಿಯನ್ನು ದೇಶ ವಿದೇಶಗಳಿಗೂ ವಿಸ್ತರಿಸಿಕೊಂಡಿದೆ.
ಇದೀಗ ಈ ಮೈಸೂರ್ ಪಾಕ್ ವಿಶ್ವದ ಸ್ಟ್ರೀಟ್ ಫುಡ್ ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ. ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಮೈಸೂರುಪಾಕ್, ಮೈಸೂರು ಅಂದ್ರೆ ಮೈಸೂರ್ ಪಾಕ್ ಎನ್ನುವಷ್ಟು ಖ್ಯಾತಿ ಗಳಿಸಿದ್ದು, ಇದೀಗ ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡಿದೆ. 4.4 ರೇಟಿಂಗ್ ಪಡೆದ ಮೈಸೂರ್ ಪಾಕ್, ಆನ್ಲೈನ್ ಮಾರ್ಕೆಟ್ನಲ್ಲಿ ವಿಶ್ವದ 50 ವಿಖ್ಯಾತ ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ಕುಲ್ಫಿಗೆ 18ನೇ ಸ್ಥಾನ, ಕುಲ್ಫಿ ಫಲೂಡಾಗೆ 32ನೇ ಸ್ಥಾನ ಸಿಕ್ಕಿದೆ.
ಟೇಸ್ಟ್ ಅಟ್ಲಾಸ್, ವಿಶ್ವದ ಬೆಸ್ಟ್ ಸ್ಟ್ರೀಟ್ ಫುಡ್ ಸ್ವೀಟ್ನ ಟಾಪ್ 50 ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಮೈಸೂರ್ ಪಾಕ್ ಗೆ 4.4 ರೇಟಿಂಗ್ನೊಂದಿಗೆ 14ನೇ ಸ್ಥಾನ ಸಿಕ್ಕಿದೆ. ಇನ್ನು ಕುಲ್ಫಿಗೆ 4.3 ರೇಟಿಂಗ್ ನೊಂದಿಗೆ 18ನೇ ಸ್ಥಾನ ನೀಡಲಾಗಿದೆ. ಫಲೂದಾ 4.0 ರೇಟಿಂಗ್ನೊಂದಿಗೆ 32ನೇ ಸ್ಥಾನ ಪಡೆದುಕೊಂಡಿದೆ.
ಇಂತಹ ಮೈಸೂರ್ ಪಾಕ್ ನಮ್ಮ ಮೈಸೂರಿನಲ್ಲಿಯೇ ತಯಾರಾಗಿದ್ದು ಎನ್ನುವುದೇ ಕನ್ನಡಿಗರೆಲ್ಲರಿಗೂ ಹೆಮ್ಮೆ ತರುವ ವಿಚಾರ. ಅಷ್ಟೇ ಅಲ್ಲದೆ ದೇಶ ವಿದೇಶಗಳಿಗೆ ಮೈಸೂರಿನ ಹೆಸರನ್ನು ಪರಿಚಯಿಸಿದ ಸಿಹಿ ತಿನಿಸು ಕೂಡ ಹೌದು. ಇಂತಹ ತಿನಿಸು ಮೈಸೂರು ಅರಮನೆಯ ಪಾಕಶಾಲೆಯಲ್ಲಿಯೇ ತಯಾರಾಗಿದ್ದು ಎನ್ನುವುದೇ ವಿಶೇಷ.