ಶಾಸಕ ಮುನಿರತ್ನರನ್ನು ಗಡಿಪಾರು ಮಾಡಿ : ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹ
ಫ್ರೀಡಂ ಪಾರ್ಕ್ನಲ್ಲಿ ‘ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ’ದ ನೇತೃತ್ವದಲ್ಲಿ ಪ್ರತಿಭಟನೆ
ಬೆಂಗಳೂರು : ವಿಜಯದಶಮಿಯ ಒಳಗೆ ಮುನಿರತ್ನನನ್ನು ಶಾಸಕ ಸ್ಥಾನ ಹಾಗೂ ಬಿಜೆಪಿಯಿಂದ ವಜಾಗೊಳಿಸಿ, ಕರ್ನಾಟಕ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ‘ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ’ದ ನೇತೃತ್ವದಲ್ಲಿ ಆಯೋಜಿಸಿದ್ದ ಜಾತಿ ನಿಂದನೆ ಹಾಗೂ ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡಿದ್ದ ಶಾಸಕ ಮುನಿರತ್ನ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಸಕ ಮುನಿರತ್ನರ ಅಕ್ರಮ ಆಸ್ತಿಯನ್ನು ಸರಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕ ಮುನಿರತ್ನ ಗೆದ್ದಿರುವುದು ಜನಾದೇಶವೋ? ಮುನಿರತ್ನ ಮಾಡಿರುವ ಅಕ್ರಮಗಳನ್ನು ಕೇಳಿದರೇ ನಾವು ಎಲ್ಲಿದ್ದೇವೆಂಬ ಪ್ರಶ್ನೆ ಮೂಡುತ್ತದೆ. ರಾಜ್ಯದ ಯಾವುದೇ ಸ್ಥಳಕ್ಕೆ ಮುನಿರತ್ನ ಹೋದರೆ ಕೈಯಲ್ಲಿ ಪಾದರಕ್ಷೆ ಹಿಡಿದು ಎದುರು ನಿಲ್ಲಬೇಕು. ಮನ್ಕೀ ಬಾತ್, ಬೇಟಿ ಬಚಾವೋ ಎಂದು ಮಾತನಾಡುವ ಪ್ರಧಾನಿ ಮೋದಿ ಅವರು ಮಣಿಪುರದಲ್ಲಿ ಯಾಕೆ ಮಾತಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.
ಆಡಳಿತ ಪಕ್ಷವು ಮುನಿರತ್ನ ಅವರನ್ನು ವಿಧಾನಸಭೆ, ರಾಜಭವನ ಪ್ರವೇಶಿಸದಂತೆ ಕ್ರಮವಹಿಸಬೇಕು. ರಾಜಭವನ ನೋಟೀಸ್ ಜಾರಿ ಮಾಡುವುದಕ್ಕೆ ಇರುವುದಲ್ಲ. ಹಾಗಿದ್ದರೆ ಮುನಿರತ್ನ ವಿರುದ್ಧ ನೋಟೀಸ್ ಜಾರಿ ಮಾಡಬೇಕಿತ್ತು. ರಾಜ್ಯಪಾಲರು ಬಿಜೆಪಿ ಪಕ್ಷದ ವಕ್ತಾರರೇ? ನ್ಯಾಯಾಧೀಶರು ನ್ಯಾಯವನ್ನು ಗೌರವಿಸಬೇಕು. ರಾಜ್ಯ ಮತ್ತು ದೇಶ ಕೆಡಲು ನ್ಯಾಯಾಧೀಶರ ಪಾಲೂ ಇದೆ. ನ್ಯಾಯಾದೀಶರು ನೀಡಿರುವ ತೀರ್ಪನ್ನು ಜನ ನೋಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಹೋರಾಟಗಾರ ಬಿ.ಗೋಪಾಲ್ ಮಾತನಾಡಿ, ‘ಕುವೆಂಪು ಅವರು ಅಂಬೇಡ್ಕರ್ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಅವರ ಎಲ್ಲ ಆದರ್ಶಗಳನ್ನು ನಾವು ಒಪ್ಪಿಕೊಳ್ಳಬೇಕಿತ್ತು. ಅನಾದಿಕಾಲದಿಂದಲೂ ಎಲ್ಲ ಜಾತಿಗಳು ಒಟ್ಟಾಗಿ ಬಂದಿವೆ. ಬಿಜೆಪಿಯವರು ಸಂವಿಧಾನಕ್ಕೆ ಗೌರವ ಕೊಡುವುದಾದರೆ. ಮುನಿರತ್ನನನ್ನು ಬಿಜೆಪಿಯಿಂದ ವಜಾಗೊಳಿಸಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಡಾ.ರಂಗನಾಥ್, ಶ್ರೀನಿವಾಸ್, ಪರಿಷತ್ ಸದಸ್ಯರಾದ ಸುಧಾಮ ದಾಸ್, ಎಸ್.ರವಿ, ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಜಿ.ಕೃಷ್ಣಪ್ಪ, ಹೋರಾಟಗಾರರಾದ ಚೆನ್ನಕೃಷ್ಣಪ್ಪ, ಹೆಬ್ಬಾಳ ವೆಂಕಟೇಶ್, ಡಿ.ಶಿವಶಂಕರ್, ಆರ್.ಮೋಹನ್ ರಾಜ್, ಬಸವರಾಜ್ ಕೌತಾಳ್, ಹನುಮಂತೇಗೌಡ, ಹನುಮಂತರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಸಚಿವರಿಗೆ ಕಪ್ಪು ಬಾವುಟ ತೋರಿಸುತ್ತೇವೆ: ‘ಮುನಿರತ್ನ ಮನಸ್ಥಿತಿ ಇರುವ ಯಾವುದೇ ವ್ಯಕ್ತಿಯಾಗಲಿ ಅವರಿಗೆ ಜನಪ್ರತಿನಿಧಿಯಾಗುವ ಅರ್ಹತೆ ಇರುವುದಿಲ್ಲ. ಸಂವಿಧಾನದ ಅಡಿಯಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿ, ಮುನಿರತ್ನನಿಗೆ ಅಧಿಕಾರ ಮಾಡಲು ಅವಕಾಶ ಕೊಟ್ಟಿರುವುದು ಬಿಜೆಪಿ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಮುನಿರತ್ನ ಪರ ನಿಲ್ಲುತ್ತಾರೆ. ಒಕ್ಕಲಿಗ ಸಮಾಜ, ಮಹಿಳೆ, ಬಹುಸಂಖ್ಯಾತ ಜನರಾದ ದಲಿತರ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಅಧ್ಯಕ್ಷರು ಅಗತ್ಯ ಕ್ರಮವಹಿಸದಿದ್ದರೇ, ಕೇಂದ್ರ ಬಿಜೆಪಿ ಸಚಿವರು ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡಿ ಧಿಕ್ಕಾರ ಕೂಗುತ್ತೇವೆ’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
‘ಮನುವಾದ ಎನ್ನುವ ಅಸ್ತ್ರ ನಮ್ಮ ಸಮುದಾಯಗಳನ್ನು ಛಿದ್ರಗೊಳಿಸಿ, ಕೆಲ ಸಮುದಾಯಗಳಿಗೆ ಆಡಳಿತ, ಆರ್ಥಿಕತೆಯನ್ನು ಕೊಡುವ ಹಾಗೆ ಮಾಡಿತು. ಈಗ ನಮ್ಮ ಶೋಷಿತ ಸಮುದಾಯಗಳ ಅಧಿಕಾರ ಹಾಗೂ ಸಮಾನವಾಗಿ ಬುದುಕುವುದನ್ನು ಅಸ್ಥಿರಗೊಳಿಸುವ ಹುನ್ನಾರವನ್ನು ಮನುವಾದ ಮಾಡುತ್ತಿದೆ. ಮನುವಾದ ಶಕ್ತಿಯಿಂದಲೇ ಮುನಿರತ್ನರಂತವರು ಶಾಸಕರಾಗುತ್ತಾರೆ. ನರೇಂದ್ರ ಮೋದಿ ಅವರು ಗಣೇಶನ ಬಗ್ಗೆ ಮಾತನಾಡುತ್ತಾರೆ. ಆದರೆ ಸ್ವಪಕ್ಷದ ಶಾಸಕರು ಮಹಿಳೆಯರ ಬಗ್ಗೆ ಮಾಡಿರುವ ದೌರ್ಜನ್ಯದ ಬಗ್ಗೆ ಯಾಕೆ ಮಾತನಾಡಿಲ್ಲ’
-ಶರತ್ ಬಚ್ಚೇಗೌಡ, ಹೊಸಕೋಟೆ ಕ್ಷೇತ್ರದ ಶಾಸಕ