ಕೆಲವು ಸ್ವಾಮೀಜಿಗಳು ಯಾರು ದುಡ್ಡು ಕೊಡುತ್ತಾರೋ ಅವರ ಪರವಾಗಿ ಮಾತನಾಡುತ್ತಾರೆ: ಯತ್ನಾಳ್ ಆರೋಪ
"ಯಡಿಯೂರಪ್ಪ ಲಿಂಗಾಯತರನ್ನು ತುಳಿಯುವುದು ಬಿಟ್ಟು ಬೇರೆ ಏನು ಮಾಡಿಲ್ಲ"

ಬಸನಗೌಡ ಪಾಟೀಲ್ ಯತ್ನಾಳ್
ಹೊಸದಿಲ್ಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಮಗನ ಜೊತೆ ಸೇರಿಕೊಂಡು ಲಿಂಗಾಯತ ನಾಯಕರನ್ನು ತುಳಿಯುವುದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಡಿಯೂರಪ್ಪ ಬಗ್ಗೆ ಗೌರವ ಇತ್ತು. ಆದರೆ, ತನ್ನನ್ನು ಜೈಲಿಗೆ ಕಳುಹಿಸಿದ ಮಗನನ್ನೆ ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ಮಾಡಿಸಿದ ಬಳಿಕ ಆ ಗೌರವವೆಲ್ಲ ಕೊಚ್ಚಿಕೊಂಡು ಹೋಗಿದೆ ಎಂದು ತಿಳಿಸಿದರು.
ಲಿಂಗಾಯತರು ಈಗ ಯಡಿಯೂರಪ್ಪ ಜೊತೆಯಿಲ್ಲ. ಅವರ ಮೆರೆದಾಟವೆಲ್ಲ ಈಗ ಮುಗಿದ ಅಧ್ಯಾಯ. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಯ್ಯ ಇವರನ್ನೆಲ್ಲ ತುಳಿದುಕೊಂಡು ಅವರು ಮೇಲೆ ಬಂದಿರುವುದು. ರಾಜ್ಯದಲ್ಲಿ ಕೆಲವು ಸ್ವಾಮೀಜಿಗಳಿದ್ದಾರೆ ಯಾರು ದುಡ್ಡು ಕೊಡುತ್ತಾರೋ, ಅವರ ಪರವಾಗಿ ಮಾತನಾಡುತ್ತಾರೆ. ನೀವು ಒಂದು ಲಕ್ಷ ರೂಪಾಯಿ ಕೊಟ್ಟರೇ, ನಿಮ್ಮ ಪರವಾಗಿಯೂ ಹೇಳಿಕೆಗಳನ್ನು ನೀಡುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದರು.
‘ಸ್ವಾಮೀಜಿಗಳು ಹಣ ತೆಗೆದುಕೊಂಡು ಯಾರ ಪರವಾಗಿ ಬೇಕಾದರೂ ಹೇಳಿಕೆ ನೀಡುತ್ತಾರೆ ಎಂದು ಹೇಳುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್, ಎಲ್ಲ ಸ್ವಾಮೀಜಿಗಳನ್ನು ಹಾಗೂ ಇಡೀ ಲಿಂಗಾಯತ ಸಮುದಾಯವನ್ನು ಅವಮಾನಿಸಿದ್ದಾರೆ. ಈ ಕೂಡಲೆ ಅವರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು’
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ