ಕಲ್ಯಾಣ ಕರ್ನಾಟಕ-371 (ಜೆ) ಅನುಷ್ಠಾನಕ್ಕಾಗಿ ಉಪಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನೇಮಕಾತಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಕಲ್ಯಾಣ ಕರ್ನಾಟಕ-371 (ಜೆ) ಅನುಷ್ಠಾನಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಉಪಸಮಿತಿಯನ್ನು ರಚಿಸಲಾಗಿದೆ. ಕಲ್ಯಾಣ ಕರ್ನಾಟಕ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿ ಮತ್ತು ಮುಂಬಡ್ತಿಗಳಲ್ಲಿನ ಗೊಂದಲಗಳನ್ನು ಉಪಸಮಿತಿ ಪರಿಹರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಶಶೀಲ್ ಜಿ ನಮೋಶಿ ಪ್ರಶ್ನೆಗೆ ಉತ್ತರಿಸಿದ ಅವರು, 317 (ಜೆ)ನಡಿ ನೇಮಕಾತಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಹೊರಡಿಸಲಾಗಿರುವ ಸುತ್ತೋಲೆಗಳಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನು ಪರಿಹರಿಸಲಾಗಿದೆ. ಈ ಕುರಿತು ಜೂ.3ರಂದು ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು.
ಸ್ಥಳೀಯ ವೃಂದ ಹಾಗೂ ಮಿಕ್ಕುಳಿದ ವೃಂದಕ್ಕೆ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ನಡೆಸುವುದು ಸೇರಿದಂತೆ ನೇಮಕಾತಿಗೆ ಸಂಬಂಧಿಸಿದಂತೆ ಸ್ಪಷ್ಟವಾಗಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ತಪ್ಪುಗಳಾದಲ್ಲಿ ನೇಮಕಾತಿ ಪ್ರಾಧಿಕಾರವೇ ನೇರಹೊಣೆ ಎಂದು ತಿಳಿಸಲಾಗಿದೆ ಎಂದು ಅವರು ಹೇಳಿದರು.





